‘ಇಂದು ಸರ್ಕಾರ್’ ನಿಂದ ಕಾಂಗ್ರೆಸಿಗರ ಭಾವನೆಗೆ ಘಾಸಿ: ಮೊಯ್ಲಿ

ಹೊಸದಿಲ್ಲಿ, ಜು.23: ಮಧುರ್ ಭಂಡಾರ್ಕರ್ ನಿರ್ದೇಶನದ ತುರ್ತು ಪರಿಸ್ಥಿತಿ ಆಧಾರಿತ ಹಿಂದಿ ಸಿನೆಮ ‘ಇಂದು ಸರ್ಕಾರ್’ ಶುಕ್ರವಾರ ಬಿಡುಗಡೆಯಾಗಲಿದ್ದು ಈ ಸಿನೆಮದಿಂದ ಕಾಂಗ್ರೆಸ್ ಪಕ್ಷದವರ ಭಾವನೆಗೆ ಘಾಸಿಯಾಗಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
1975-77ರ ಅವಧಿಯಲ್ಲಿದ್ದ ತುರ್ತು ಪರಿಸ್ಥಿತಿ ಸಂದರ್ಭದ ಘಟನೆಗಳನ್ನು ಆಧರಿಸಿರುವ ಈ ಸಿನೆಮದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಟೀಕೆ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಆದರೆ ತಾನು ಸಿನೆಮ ಪ್ರದರ್ಶನದ ಸಂದರ್ಭ- ಇದು ಕಲ್ಪಿತ ಕಥೆ ಎಂದು ಸ್ಪಷ್ಟಪಡಿಸುವುದಾಗಿ ಭಂಡಾರ್ಕರ್ ತಿಳಿಸಿದ್ದಾರೆ.
ಈ ಸಿನೆಮ ಹಲವು ಕಾಂಗ್ರೆಸಿಗರ ಭಾವನೆಗೆ ಘಾಸಿ ಎಸಗುತ್ತದೆ. ಪ್ರಧಾನಿ ಕೂಡಾ ಇದನ್ನೇ ಬಯಸಿದ್ದಾರೆ. ಅಂತಿಮವಾಗಿ ಇದು ಪ್ರಧಾನಿಯವರನ್ನೂ ಘಾಸಿಗೊಳಿಸಲಿದೆ. ಇಂತಹ ಹೀನ ಕೃತ್ಯಗಳು ಬಿಜೆಪಿಗೆ ಮಾರಕವಾಗಲಿದೆ. ಈ ರೀತಿಯ ಕೃತ್ಯವನ್ನು ಅವರು ಮಾಡಿದಷ್ಟೂ ಬಿಜೆಪಿಗೆ ನಿರ್ಗಮನದ ಬಾಗಿಲು ತೆರೆದಂತೆ ಆಗುತ್ತದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ ಹೇಳಿದರು.
ಇಂದು ಸರ್ಕಾರ್ ಸಿನೆಮ ಜುಲೈ 28ರಂದು ಬಿಡುಗಡೆಯಾಗಲಿದೆ.





