ಕಾರದ ಪುಡಿ ಎರಚಿ ಮಹಿಳೆಯ ಚಿನ್ನಾಭರಣ ಸುಲಿಗೆ
ಉಡುಪಿ, ಜು.23: ಅಪರಿಚಿತ ವ್ಯಕ್ತಿಯೊಬ್ಬ ಗದ್ದೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಹಾಗೂ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಜು.22ರಂದು ಸಂಜೆ 5.45ರ ಸುಮಾರಿಗೆ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ನಡೆದಿದೆ.
ಮಾರ್ಪಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಹಿತೇಶ್ ಪಾಚ್ಪುತೆ ಎಂಬವರ ಪತ್ನಿ ವಾಣಿ ನಾಯ್ಕ(30) ಎಂಬವರು ಮನೆ ಸಮೀಪದ ಗದ್ದೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ವಾಣಿ ನಾಯ್ಕರ ಬಾಯಿಗೆ ಬಟ್ಟೆ ತುರುಕಿ ಹಾಗೂ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕುತ್ತಿಗೆಯಲ್ಲಿದ್ದ ಎರಡೆಳೆಯ ಸಣ್ಣ ಕರಿಮಣಿ ಸರ ಹಾಗೂ ಕೈಯಲ್ಲಿದ್ದ ಮೂರು ಉಂಗುರಗಳನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಕಳವು ಮಾಡಲಾದ ಚಿನ್ನಾಭರಣಗಳ ಒಟ್ಟು ಮೌಲ್ಯ 36,000ರೂ. ಎಂದು ಅಂದಾಜಿಸಲಾಗಿದೆ. ಸುಲಿಗೆ ಮಾಡಿದ ವ್ಯಕ್ತಿಯು ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು ಕನ್ನಡ ಮಾತನಾಡುತ್ತಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





