'ಬಿದ್ದು ಪಲ್ಟಿಯಾದ' ಠಾಗೋರ್ ಪಾರ್ಕಿನ ನೀರಿನ ಟ್ಯಾಂಕ್ ರವಿವಾರ ಸಂಜೆ ಕಂಡಿದ್ದು ಹೀಗೆ
ಸಾಮಾಜಿಕ ಜಾಲತಾಣಗಳಲ್ಲಿ ಮಿತಿಮೀರಿದ ವದಂತಿಕೋರರ ಹಾವಳಿ

ಮಂಗಳೂರು, ಜು.23: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಷಯಗಳನ್ನು, ವದಂತಿಗಳನ್ನು ಹರಡುವುದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ಈ ರೀತಿಯ ಅಂತೆ-ಕಂತೆ ವಿಷಯಗಳು ಕೆಲವೊಮ್ಮೆ ಸಮಾಜದ ಸ್ವಾಸ್ಥ್ಯವನ್ನೂ ಹದಗೆಡುವ ಸಾಧ್ಯತೆಗಳಿವೆ.
ಮಂಗಳೂರಿನ ಬಾವುಟಗುಡ್ಡೆಯ ಠಾಗೋರ್ ಪಾರ್ಕ್ ನಲ್ಲಿರುವ ನೀರಿನ ಟ್ಯಾಂಕ್ ಬೀಳುವ ದೃಶ್ಯ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದೆ. ಇದೇ ಪಾರ್ಕ್ ಸಮೀಪ ಶಾಪಿಂಗ್ ಮಾಲ್, ಕಾಲೇಜು ಹಾಗೂ ಮಸೀದಿಯಿದ್ದು, ಪಾರ್ಕ್ ಗೂ ಹಲವರು ಪ್ರತಿನಿತ್ಯ ಹಲವರು ಭೇಟಿ ನೀಡುತ್ತಾರೆ. ಪಾರ್ಕ್ ನಲ್ಲಿರುವ ಟ್ಯಾಂಕ್ ಬಿದ್ದಲ್ಲಿ ಸಂಭವಿಸುವ ಅಪಾಯವನ್ನು ಊಹಿಸಲಸಾಧ್ಯ. ಆದರೆ ಯಾವುದೋ ಪ್ರದೇಶದಲ್ಲಿ ಟ್ಯಾಂಕ್ ಬೀಳುವ ದೃಶ್ಯವನ್ನು ವದಂತಿಕೋರರು ಮಂಗಳೂರಿನ ದೃಶ್ಯ ಎಂದು ತಿರುಚಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಕೂಡ ಆಗಿತ್ತು. ಆದರೆ ಠಾಗೋರ್ ಪಾರ್ಕ್ ನ ನೀರಿನ ಟ್ಯಾಂಕ್ ಕುಸಿದೂ ಬಿದ್ದಿಲ್ಲ, ಅಂತಹ ಘಟನೆ ಮಂಗಳೂರಿನಲ್ಲಿ ನಡೆದಿಲ್ಲ ಎನ್ನುವುದು ವಾಸ್ತವ.
ರವಿವಾರ ಸಂಜೆ ಕಂಡು ಬಂದ ಠಾಗೋರ್ ಪಾರ್ಕಿನ ನೀರಿನ ಟ್ಯಾಂಕಿನ ಚಿತ್ರಗಳು ಈ ಕೆಳಗಿನಂತಿವೆ







