ಮಲವನ್ನು ಕೈಯಿಂದ ಶುಚಿಗೊಳಿಸುವ ಅನಾಗರಿಕ ಪದ್ಧತಿಯನ್ನು ಕೇಂದ್ರ ಸರಕಾರ ನಿಷೇಧಿಸಲಿ: ಬೆಜವಾಡ ವಿಲ್ಸನ್

ಬೆಂಗಳೂರು, ಜು.23: ದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ದಲಿತರು ಮಾನವನ ಮಲವನ್ನು ತಮ್ಮ ಕೈಯಾರೆ ಶುಚಿಗೊಳಿಸುವ ಅತ್ಯಂತ ಅನಾಗರಿಕ ಪದ್ಧತಿಯನ್ನು ಕೇಂದ್ರ ಸರಕಾರ ನಿಷೇಧಿಸಲಿ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್ ಆಗ್ರಹಿಸಿದ್ದಾರೆ.
ರವಿವಾರ ನಗರದ ಜಿಕೆವಿಕೆ ಆವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಏಕಾಏಕಿ ದೇಶದಲ್ಲಿ ಚಲಾವಣೆಯಲ್ಲಿದ್ದ ನೋಟುಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳುವ ಸರಕಾರಕ್ಕೆ, ಈ ಅಮಾನವೀಯ ಪದ್ಧತಿಯನ್ನು ರದ್ದು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ಶೇ.45ರಷ್ಟು ದಲಿತರು ಇಂದಿಗೂ ಬಡತನ ರೇಖೆಗಿಂತ ಕೆಳಗೆ ಜೀವನ ಸಾಗಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ದಲಿತರ ಜೀವನಮಟ್ಟ ಸುಧಾರಣೆಯಾಗಿಲ್ಲ. ಶೇ.27ರಷ್ಟು ದಲಿತರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ ಎಂದು ಬೆಜವಾಡ ವಿನ್ಸನ್ ಬೇಸರ ವ್ಯಕ್ತಪಡಿಸಿದರು.
ದೇಶದ ಯಾವುದೇ ಭಾಗದಲ್ಲಿಯೂ ದಲಿತರ ಹಾಗೂ ಇತರ ವರ್ಗದವರು ಸಮಾನತೆಯಿಂದ ಜೀವನ ನಡೆಸುತ್ತಿರುವ ಒಂದೇ ಒಂದು ಹಳ್ಳಿಯನ್ನು ರೂಪಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆಯ ಸಮಾಜ ಎಲ್ಲಿದೆ ಎಂದು ಅವರು ಕೇಳಿದರು.
ಕರ್ನಾಟಕ ಸರಕಾರವು ದೇಶ ವಿದೇಶಗಳ ಜನರನ್ನು ತನ್ನ ರಾಜ್ಯಕ್ಕೆ ಪ್ರವಾಸೋದ್ಯಮಕ್ಕಾಗಿ ಆಹ್ವಾನಿಸುವ ಬದಲು, ಇಂತಹ ಹಳ್ಳಿಯೊಂದನ್ನು ರೂಪಿಸಿ, ಸಮಾನತೆಯ ಸಂದೇಶ ನೀಡಲು ಕರೆಯಿರಿ ಎಂದು ವಿಲ್ಸನ್ ಮನವಿ ಮಾಡಿದರು. ದೇಶಾದ್ಯಂತ ಅನೇಕ ಸಮಸ್ಯೆ ಗಳಿವೆ. ದಲಿತರು, ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೋಮುವಾದಿಗಳ ಅಟ್ಟಹಾಸದ ನಡುವೆಯೂ ಕರ್ನಾಟಕ ಜನಸಾಮಾನ್ಯರಿಗೆ ಸುರಕ್ಷಿತ ತಾಣವಾಗಿದೆ. ಅಂಬೇಡ್ಕರ್ ಗೆ ಯಾವುದೇ ಪ್ರಶಸ್ತಿಗಳು ಬೇಡ. ಅವರು ಬಯಸಿದ ಸಮಾನತೆ, ಪ್ರಜಾಪ್ರಭುತ್ವದ ರಕ್ಷಣೆಯಾದರೆ ಸಾಕು ಎಂದು ಅವರು ಹೇಳಿದರು. ಫ್ಯಾಸಿಸ್ಟ್ ಶಕ್ತಿಗಳು ಅಂಬೇಡ್ಕರ್ ಹೆಸರನ್ನು ಹೇಳಿಕೊಂಡು ತಿರುಗುತ್ತಿವೆ. ಆದರೆ, ಅವರಿಗೆ ಅಂಬೇಡ್ಕರ್ ಹೆಸರು ಹೇಳುವ ಯಾವ ನೈತಿಕತೆಯೂ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.







