ಸಂಸತ್ತು ನನ್ನನ್ನು ಸೃಷ್ಟಿಸಿದೆ: ಪ್ರಣವ್ ಮುಖರ್ಜಿ

ಹೊಸದಿಲ್ಲಿ, ಜು. 23: ನನ್ನನ್ನು ಈ ಸಂಸತ್ತು ಸ್ಣಷ್ಟಿಸಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ರವಿವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾವನಾತ್ಮಕವಾಗಿ ನುಡಿದರು.
ಭಾರತದ 13ನೇ ರಾಷ್ಟ್ರಪತಿಯಾಗಿರುವ ಪ್ರಣವ್ ಮುಖರ್ಜಿ ಸೋಮವಾರ ರಾಷ್ಟ್ರಪತಿ ಭವನ ತ್ಯಜಿಸುವ ಮೂಲಕ ಅವರ ಉತ್ತರಾಧಿಕಾರಿ ರಾಮನಾಥ್ ಕೋವಿಂದ್‌ಗೆ ಅವಕಾಶ ಮಾಡಿಕೊಟ್ಟರು.
ನಾನು ಈ ಸಂಸತ್ತಿನ ಸೃಷ್ಟಿ ಎಂದು ಪ್ರತಿಪಾದಿಸುತ್ತೇನೆ. ಆದರೆ, ಇದು ಅಪ್ರಮಾಣಿಕ ಎಂದು ಪರಿಗಣಿಸಬಾರದು ಎಂದು ಹೇಳಿದ ಪ್ರಣವ್ ಮುಖರ್ಜಿ , ಬೆಂಬಲ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿದರು.
ರಾಷ್ಟ್ರಪತಿಯಾಗಿ ನಾನು ಸಂವಿಧಾನದ ಸಮರ್ಥನೆ, ರಕ್ಷಣೆಗೆ ಪ್ರಯತ್ನಿಸಿದ್ದೇನೆ. ಇದು ಮಾತಿನಲ್ಲಿ ಮಾತ್ರವಲ್ಲ, ಅನುಷ್ಠಾನದಲ್ಲಿ ಕೂಡ ಎಂದು ಅವರು ಹೇಳಿದರು.
2012ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮುನ್ನ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಮುಖರ್ಜಿ, ಸಂಸತ್ತಿನಲ್ಲಿ ಇದ್ದ ಕಾರಣಕ್ಕಾಗಿ ಚರ್ಚೆ ಹಾಗೂ ಜಿಜ್ಞಾಸೆಯ ವೌಲ್ಯ ತಿಳಿದುಕೊಳ್ಳಲು ಸಾಧ್ಯವಾಯಿತು ಎಂದರು.
ಈ ಸಂದರ್ಭ ಮುಖರ್ಜಿ, ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾದ ಜಿಎಸ್‌ಟಿಯನ್ನು ಶ್ಲಾಘಿಸಿದರು. ಇತ್ತೀಚೆಗೆ ಆರಂಭಿಸಲಾದ ಜಿಎಸ್‌ಟಿ ಕೋ-ಆಪರೇಟಿವ್ ಫೆಡರಲಿಸಂಗೆ ಒಂದು ಉತ್ತಮ ಉದಾಹರಣೆ. ಇದು ನಮ್ಮ ಪ್ರಜಾಪ್ರಭುತ್ವದ ಪ್ರಭುದ್ಧತೆಗೆ ಸಾಕ್ಷಿ ಎಂದರು.







