ಇಸ್ರೇಲ್ ಸುಳಿವು; ಜೆರುಸಲೇಂನಲ್ಲಿ ಮುಂದುವರಿದ ಉದ್ವಿಗ್ನತೆ
ಅಲ್ ಅಕ್ಸಾ ಭದ್ರತಾ ನಿರ್ಬಂಧಗಳಲ್ಲಿ ಸಡಿಲಿಕೆ ಸಾಧ್ಯತೆ
.jpg)
ಟೆಲ್‌ಅವೀವ್,ಜು.23: ಜೆರುಸಲೇಂನ ಅಲ್‌ಅಕ್ಸಾ ಮಸೀದಿಯಲ್ಲಿ ಲೋಹಶೋಧಕಗಳ ಅಳವಡಿಕೆ ಹಾಗೂ 50ಕ್ಕಿಂತ ಕೆಳವಯಸ್ಸಿನ ಪುರುಷರಿಗೆ ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟ ಘಟನೆಯು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾದ ರಾಜಕೀಯ ಒತ್ತಡವನ್ನೆದುರಿಸುತ್ತಿದ್ದಾರೆ.
ಅಲ್‌ಅಕ್ಸಾ ಮಸೀದಿಗೆ ವಿಧಿಸಲಾದ ನೂತನ ಭದ್ರತಾ ನಿರ್ಬಂಧಗಳನ್ನು ಬದಲಾಯಿಸುವ ಬಗ್ಗೆ ಪರಿಶೀಲಿಸುವ ಬಗ್ಗೆ ತಾವು ಮುಕ್ತಮನಸ್ಸು ಹೊಂದಿರುವುದಾಗಿ ಇಸ್ರೇಲಿ ಅಧಿಕಾರಿಗಳು ರವಿವಾರ ಸೂಚನೆ ನೀಡಿದ್ದಾರೆ.ಶುಕ್ರವಾರ ಜೆರುಸಲೇಂನಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ನೆತನ್ಯಾಹು ರವಿವಾರ ಸಂಪುಟ ಸಭೆ ನಡೆಸಿದರು. ಆ ಆನಂತರ ಅವರು ತನ್ನ ಭದ್ರತಾ ಸಂಪುಟದ ಸಭೆಯಲ್ಲಿಯೂ ಪಾಲ್ಗೊಂಡರು.
ಶುಕ್ರವಾರ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾದ ಜೆರುಸಲೇಂನಲ್ಲಿ ರವಿವಾರವೂ ಉದ್ವಿಗ್ನಸ್ಥಿತಿ ನೆಲೆಸಿತ್ತು. ಅಲ್ ಅಕ್ಸಾ ಮಸೀದಿಯ ಆವರಣದಲ್ಲಿ ಇಂದು ಕೂಡಾ ಲೋಹಶೋಧಕಗಳನ್ನು ಉಳಿಸಿಕೊಳ್ಳಲಾಗಿತ್ತು. ಮಸೀದಿಯ ಆವರಣದ ಒಂದು ಪ್ರವೇಶದ್ವಾರದಲ್ಲಿ ಸಿಸಿ ಕ್ಯಾಮರಾಗಳನ್ನು ಕೂಡಾ ಸ್ಥಾಪಿಸಲಾಗಿತ್ತು.
ಈ ಮಧ್ಯೆ ಇಸ್ರೇಲ್‌ನ ಮೇಜರ್ ಜನರಲ್ ಹಾಗೂ ಫೆಲೆಸ್ತೀನ್ ಪ್ರಾಂತದಲ್ಲಿ ನಾಗರಿಕ ರಕ್ಷಣೆಯ ಹೊಣೆಹೊತ್ತಿರುವ ಸಿಓಜಿಎಟಿ ಪಡೆಯ ವರಿಷ್ಠರಾಗಿರುವ ಯೊವಾವ್ ಮೊರ್ದೆಚೆಯ್ ಅವರು ಅಲ್‌ಅಕ್ಸಾ ಮಸೀದಿಯ ಭದ್ರತಾ ನಿರ್ಬಂಧಗಳಲ್ಲಿ ಮಾರ್ಪಾಡುಗಳನ್ನು ಮಾಡುವ ಸಾಧ್ಯತೆಯಿರುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ ಾಗಿ ಸಾರ್ವಜನಿಕ ಭದ್ರತಾ ಅಧಿಕಾರಿ ಗಿಲಾದ್ ಎರ್ದಾನ್ ಪೊಲೀಸರು ಅಲ್‌ಅಕ್ಸಾ ಮಸೀದಿಯಲ್ಲಿ ತೃಪ್ತಿಕರವಾದ ಪರ್ಯಾಯ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುವ ತನಕ ಅಲ್ಲಿ ಲೋಹಶೋಧಕಗಳನ್ನು ಉಳಿಸಿಕೊಳ್ಳುವುದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಅಲ್‌ಅಕ್ಸಾ ಮಸೀದಿಯ ಆವರಣದಲ್ಲಿ ಲೋಹಶೋಧಕಗಳ ಅಳವಡಿಕೆಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಜೆರುಸಲೇಂನಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಅಲ್‌ಅಕ್ಸಾ ಮಸೀದಿಯ ಬಳಿ ಜುಲೈ 14ರಂದು ನಡೆದ ದಾಳಿಯೊಂದರಲ್ಲಿ ಇಬ್ಬರು ಇಸ್ರೇಲಿ ಪೊಲೀಸರು ಹತ್ಯೆಯಾದ ಘಟನೆಯ ಬಳಿಕ ಮಸೀದಿಯ ಆವರಣದಲ್ಲಿ ಲೋಹಶೋಧಕಗಳನ್ನು ಅಳವಡಿಸಲಾಗಿತ್ತು ಹಾಗೂ 50 ವರ್ಷಕ್ಕಿಂತ ಕೆಳಗಿನ ಪುರುಷರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಮಸೀದಿಯಲ್ಲಿ ಲೋಹಶೋಧಕಗಳ ಅಳವಡಿಕೆಯನ್ನು ಫೆಲೆಸ್ತೀನಿಯರು ಬಲವಾಗಿ ವಿರೋಧಿಸುತ್ತಿದ್ದಾರೆ. ಮಸೀದಿಯಿರುವ ನಿವೇಶನದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವ ಪ್ರಯತ್ನವಾಗಿ ಇಸ್ರೇಲ್ ಲೋಹಶೋಧಕಗಳನ್ನು ಅಳವಡಿಸುತ್ತಿದೆಯೆಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನೆ ಭುಗಿಲೇಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್ ರವಿವಾರವೂ ಅಲ್‌ಅಕ್ಸಾ ಮಸೀದಿಗೆ 50 ವರ್ಷಕ್ಕಿಂತ ಕೆಳವಯಸ್ಸಿನ ಪುರುಷರಿಗೆ ಪ್ರವೇಶವನ್ನು ನಿರಾಕರಿಸಿತ್ತು.
ಅಲ್ ಅಕ್ಸಾ ಮಸೀದಿಯಲ್ಲಿ ಭದ್ರತಾ ನಿರ್ಬಂಧಗಳನ್ನು ವಿಧಿಸಿರುವುದನ್ನು ವಿರೋಧಿಸಿ ಜೆರುಸಲೇಂನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ತುರ್ತು ಸಭೆ ಕರೆದಿದೆ. ಜೆರುಸಲೇಂನ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಬಗ್ಗೆ ತುರ್ತು ಸಮಾಲೋಚನೆ ನಡೆಸುವಂತೆ ಈಜಿಪ್ಟ್, ಫ್ರಾನ್ಸ್ ಹಾಗೂ ಸ್ವೀಡನ್ ದೇಶಗಳು ಭದ್ರತಾ ಮಂಡಳಿಯನ್ನು ಆಗ್ರಹಿಸಿದ್ದವು.
ಅಲ್‌ಅಕ್ಸಾ ಮಸೀದಿಯಲ್ಲಿ ನೂತನ ಭದ್ರತಾ ನಿರ್ಬಂಧಗಳನ್ನು ಹೇರುವ ಮೂಲಕ ಇಸ್ರೇಲ್ ಬೆಂಕಿಯೊಂದಿಗೆ ಸರಸವಾಡುತ್ತಿದೆಯೆಂದು ಅರಬ್ ಲೀಗ್ ವರಿಷ್ಠ ಅಹ್ಮದ್ ಅಬುಲ್ ಗೆಯಿತ್ ರವಿವಾರ ಎಚ್ಚರಿಕೆ ನೀಡಿದ್ದಾರೆ.







