ಡೆಂಗ್,ಚಿಕನ್‌ಗುನ್ಯ ನಿಯಂತ್ರಣಕ್ಕೆ ಪ್ರಯೋಗಾಲಯದ ಸೊಳ್ಳೆಗಳು!

ಸ್ಯಾನ್‌ಫ್ರಾನ್ಸಿಸ್ಕೊ,ಜು.23: ಡೆಂಗ್,ಚಿಕನ್‌ಗುನ್ಯೂ,ಝಿಕಾದಂತಹ ಮಾರಣಾಂತಿಕ ರೋಗಗಳನ್ನು ಹರಡುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು, ವಿಶ್ವವಿಖ್ಯಾತ ತಂತ್ರಜ್ಞಾನ ಸಂಸ್ಥೆ ಗೂಗಲ್ ಹಾಗೂ ಅಮೆರಕ ವಿಜ್ಞಾನಿಗಳು ಜಂಟಿಯಾಗಿ ಯೋಜನೆಯೊಂದನ್ನು ರೂಪಿಸಿದ್ದಾರೆ. ಪ್ರಯೋಗಾಲಯಗಳಲ್ಲಿ ಬ್ಯಾಕ್ಟೀರಿಯಾಗಳ ಮೂಲಕ ಸಂತಾನಶಕ್ತಿ ಹರಣಗೈಯಲ್ಪಟ್ಟ 2 ಕೋಟಿಗೂ ಅಧಿಕ ಗಂಡು ಸೊಳ್ಳೆಗಳನ್ನು ಬಿಡುಗಡೆಗೊಳಿಸುವ ಮೂಲಕ ಅವು ಈ ಮಾರಕವಾದ ರೋಗಗಳನ್ನು ಹರಡುವ ಏಡೆಸ್ ಈಜಿಪ್ಟಿ ಎಂಬ ಸೊಳ್ಳೆಗಳ ಸಂತತಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸಲಿದ್ದಾರೆ.
ಸಂತಾನಶಕ್ತಿಯನ್ನು ಕಳೆದುಕೊಂಡ ಈ ಗಂಡುಸೊಳ್ಳೆಗಳು, ಹೆಣ್ಣುಸೊಳ್ಳೆಗಳ ಜೊತೆ ಮಿಲನ ಹೊಂದಿದಾ, ಹೆಣ್ಣು ಸೊಳ್ಳೆಗಳಲ್ಲಿನ ಭ್ರೂಣವು ಹಾನಿಗೀಡಾಗಲಿದೆ ಹಾಗೂ ಅವುಗಳು ಮೊಟ್ಟೆಯಿಡುವ ಪ್ರಮಾಣ ಗಣನೀಯಾಗಿ ಕಡಿಮೆ ಯಾಗಲಿದೆಯೆಂದು ಈ ಪ್ರಯೋಗದ ನೇತೃತ್ವ ವಹಿಸಿರುವ ವಿಲಿಯಂ ಸುಲ್ಲಿವಾನ್ ಹಾಗೂ ಸ್ಕಾಟ್ ಎಲ್.ಓ. ನೀಲ್ ನೇಚರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸೊಳ್ಳೆಗಳ ಸಂತಾನಹರಣಕ್ಕಾಗಿ ಬಳಸಲಾಗುವ ಬ್ಯಾಕ್ಟೀರಿಯಾಗಳು ಮಾನವರಿಗೆ ಯಾವುದೇ ರೀತಿಯ ಸೋಂಕನ್ನು ಉಂಟು ಮಾಡಲಾರದೆಂದು ಅವರು ತಿಳಿಸಿದ್ದಾರೆ.







