ಗೋಮಾಂಸ ಸಾಗಾಟದ ಶಂಕೆ: ಲಾರಿಗೆ ಬೆಂಕಿ ಹಚ್ಚಿದ ಗುಂಪು

ಭುವನೇಶ್ವರ,ಜು.23: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿಯೊಂದು ಗೋಮಾಂಸವನ್ನು ಸಾಗಿಸುತ್ತಿದ್ದ ಶಂಕೆಯಿಂದ ಗುಂಪೊಂದು ಅದಕ್ಕೆ ಬೆಂಕಿ ಹಚ್ಚಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ರವಿವಾರ ನಡೆದಿದೆ.
ಭುವನೇಶ್ವರದಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಲಾರಿ ಗೋಲಂತರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿಯಾಗಿತ್ತು. ಲಾರಿಯನ್ನು ಮೇಲಕ್ಕೆತ್ತಲು ಚಾಲಕ ಮತ್ತು ಕ್ಲೀನರ್ ಕ್ರೇನ್ ತರಿಸಿದ್ದು, ಈ ವೇಳೆ ರಸ್ತೆಯಲ್ಲಿ ರಕ್ತ ಹರಿದಿತ್ತು. ಸುದ್ದಿಯನ್ನು ತಿಳಿದು ಸ್ಥಳಕ್ಕೆ ಧಾವಿಸಿದ ವಿಹಿಂಪ ಮತ್ತು ಬಜರಂಗ ದಳ ಕಾರ್ಯಕರ್ತರು ಲಾರಿಯ ಬಾಗಿಲುಗಳನ್ನು ಬಲಪ್ರಯೋಗದಿಂದ ತೆರೆದಿದ್ದರು.
ಉದ್ವಿಗ್ನ ಸ್ಥಿತಿ ಸೃಷ್ಟಿಯಾಗುತ್ತಿದ್ದಂತೆ ಲಾರಿಯ ಚಾಲಕ ಮತ್ತು ಕ್ಲೀನರ್ ಪರಾರಿಯಾ ಗಿದ್ದರು. ಗುಂಪು ಲಾರಿಗೆ ಬೆಂಕಿ ಹಚ್ಚಿ, ರಾಷ್ಟ್ರೀಯ ಹೆದ್ದಾರಿ 16ರಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿತ್ತು ಎಂದು ಸದರ್ ಉಪ ವಿಭಾಗ ಪೊಲೀಸ್ ಅಧಿಕಾರಿ ಅಶೋಕ ಮೊಹಂತಿ ತಿಳಿಸಿದರು.
ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಆಗಮಿಸಿದ್ದವಾದರೂ,ಆ ವೇಳೆಗಾಗಲೇ ಲಾರಿಯು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಲಾರಿ ಮಾಲಕನ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಕಾನೂನಿನಂತೆ ಲಾರಿ ಚಾಲಕನ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ತಿಳಿಸಿದ ಪೊಲೀಸರು, ಲಾರಿಯಲ್ಲಿ ಗೋಮಾಂಸವನ್ನು ಸಾಗಿಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಒಡಿಶಾದಲ್ಲಿ ಗೋವುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ 1,000 ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಆದರೆ ಹತ್ಯೆಗೆ ಅರ್ಹವಾಗಿದೆ ಮತ್ತು 14ವರ್ಷಕ್ಕೂ ಹೆಚ್ಚಿನ ವಯಸ್ಸಾಗಿದೆ ಹಾಗೂ ತಳಿವರ್ಧನೆಗೆೆ ಕಾಯಂ ಅನರ್ಹವಾಗಿದೆ ಎಂಬ ಪ್ರಮಾಣಪತ್ರವಿದ್ದರೆ ಗೂಳಿ ಮತ್ತು ಎತ್ತುಗಳ ಹತ್ಯೆಗೆ ಅವಕಾಶವಿದೆ.







