ನಕಲಿ ವೆದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ
ಮಾನ್ಯರೆ,
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ. ಈ ನಕಲಿ ವೈದ್ಯರಿಗೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಕುರಿತ ಮಾಹಿತಿ ಇರುವುದಿಲ್ಲ. ಅಲ್ಲದೆ ಇವರು ಸರಕಾರದ ವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಮತ್ತು ಪ್ರಮಾಣ ಪತ್ರ ಪಡೆದುಕೊಳ್ಳದೆ ಇದ್ದರೂ ಯಾರ ಭಯವಿಲ್ಲದೆ ಗ್ರಾಮೀಣ ಭಾಗಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಬಡ ಮತ್ತು ಅನಕ್ಷರಸ್ಥ ರೋಗಿಗಳಿಗೆ ಯಾವುದೋ ರೋಗಕ್ಕೆ ಯಾವುದೋ ಔಷಧಗಳನ್ನು ನೀಡುತ್ತಾರೆ. ಈ ನಕಲಿ ವೈದ್ಯರು ನೀಡುವ ತಪ್ಪುಮಾಹಿತಿ ಹಾಗೂ ಚಿಕಿತ್ಸೆಯಿಂದ ಅದೆಷ್ಟೋ ರೋಗಿಗಳು ಜೀವ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಈಗಾಗಲೇ ರಾಜ್ಯದಲ್ಲಿ 2,200 ನಕಲಿ ವೈದ್ಯರನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ಸರಕಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ತಿದ್ದುಪಡಿ ಮಾಡುವ ಮೂಲಕ ರಾಜ್ಯವನ್ನು ಸಂಪೂರ್ಣವಾಗಿ ನಕಲಿ ವೈದ್ಯ ಮುಕ್ತ ರಾಜ್ಯವಾಗಿ ಮಾಡಲು ಪಣ ತೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ.





