ಫೈನಲ್ ನಲ್ಲಿ ಕಶ್ಯಪ್ ಗೆ ಪ್ರಣಯ್ ಎದುರಾಳಿ
ಅಮಹೀಮ್(ಅಮೆರಿಕ), ಜು.23: ಅಮೆರಿಕ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಭಾರತದ ಪಿ. ಕಶ್ಯಪ್ ಮತ್ತು ಎಚ್.ಎಸ್.ಪ್ರಣಯ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ಧಾರೆ.
ಕಳೆದ 21 ತಿಂಗಳ ಅವಧಿಯಲ್ಲಿ ಪಿ. ಕಶ್ಯಪ್ ಮೊದಲ ಬಾರಿ ಫೈನಲ್ ತಲುಪಿದ್ದಾರೆ.
ಪ್ರಣಯ್ ಕೂಡಾ ಕಳೆದ ವರ್ಷ ಗಾಯದ ಸಮಸ್ಯೆ ಎದುರಿಸಿದ್ದರು. ಸ್ವಿಸ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಮೊದಲ ಬಾರಿ ಪ್ರಣಯ್ ಫೈನಲ್ ಪ್ರವೇಶಿಸಿದ್ದಾರೆ.
ಕಶ್ಯಪ್ ಅವರು ಕೊರಿಯಾದ ಕ್ವಾಂಗದದ ಹೀ ಹಿಯೊ ವಿರುದ್ಧ 15-21, 21-15,21-16 ಅಂತರದಲ್ಲಿ ಗೆಲುವು ದಾಖಲಿಸಿ ಫೈನಲ್‌ನಲ್ಲಿ ಸ್ಥಾನ ದೃಢಪಡಿಸಿದ್ದಾರೆ. ಕಶ್ಯಪ್ 1 ಗಂಟೆ ಮತ್ತು 6 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ಎದುರಾಳಿಗೆ ಸೋಲುಣಿಸಿದರು.
ಪ್ರಣಯ್ ಮೊದಲ ಸೆಮಿಫೈನಲ್‌ನಲ್ಲಿ ವಿಯೆಟ್ನಾಂ ಟಿಯಾನ್ ಮಿನ್ ಎಂಗ್ಯುಯೆನ್ ವಿರುದ್ಧ 21-14, 21-19 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಆಟಗಾರರು ಎರಡನೆ ಬಾರಿ ಪ್ರಶಸ್ತಿಯ ಸುತ್ತಿನಲ್ಲಿ ಹಣಾಹಣಿ ನಡೆಸುವಂತಾಗಿದೆ. ಕಳೆದ ಎಪ್ರಿಲ್‌ನಲ್ಲಿ ಕೆ.ಶ್ರೀಕಾಂತ್ ಮತ್ತು ಬಿ. ಸಾಯ್ ಪ್ರಣೀತ್ ಸಿಂಗಾಪುರ ಓಪನ್‌ನಲ್ಲಿ ಪರಸ್ಪರ ಎದುರಾಳಿಯಾಗಿದ್ದರು.ಇದರಲ್ಲಿ ಪ್ರಣೀತ್ ಅವರು ಶ್ರೀಕಾಂತ್‌ಗೆ 17-21, 21-17, 21-12 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಬಾಚಿಕೊಂಡಿದ್ದರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಅವರು ಲು ಚಿಂಗ್ ಯೋ ಮತ್ತು ಯಾಂಗ್ ಪೊ ಹ್ಯಾನ್ ವಿರುದ್ಧ ಕಠಿಣ ಹೋರಾಟ ನಡೆಸಿದರೂ ಗೆಲುವು ದೊರೆಯಲಿಲ್ಲ. ಅವರು 12-21, 21-12, 20-22 ಅಂತರದಲ್ಲಿ ಸೋಲು ಅನುಭವಿಸಿದರು.







