10ರ ಹರೆಯದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅವಕಾಶ : ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ಹೊಸದಿಲ್ಲಿ, ಜು.24: ಗರ್ಭಿಣಿಯಾಗಿರುವ ಹತ್ತರ ಹರೆಯದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿ ನೀಡಬಹುದೇ ಎಂಬ ಬಗ್ಗೆ ಬಾಲಕಿಯನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಖಚಿತಪಡಿಸಿಕೊಳ್ಳುವಂತೆ ಚಂಡೀಗಡ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಬಾಲಕಿ ಇದೀಗ 30 ವಾರಗಳ ಗರ್ಭಿಣಿಯಾಗಿದ್ದಾಳೆ. ಭಾರತದಲ್ಲಿ 20 ವಾರಗಳ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶವಿದೆ. ತಾಯಿಯ ಜೀವ ಉಳಿಸಲು ಗರ್ಭಪಾತ ನಡೆಸುವುದು ಅನಿವಾರ್ಯ ಎಂದು ವೈದ್ಯರು ದೃಢಪಡಿಸಿದರೆ ಮಾತ್ರ ಗರ್ಭಪಾತ ಮಾಡಬಹುದಾಗಿದೆ. ಬುಧವಾರ ನಡೆಯಲಿರುವ ತಪಾಸಣೆ ಸಂದರ್ಭ ತಂಡಕ್ಕೆ ನೆರವಾಗುವಂತೆಯೂ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ವಿಭಾಗೀಯ ಪೀಠವೊಂದು ಚಂಡೀಗಡದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಸೂಚಿಸಿದೆ.
ಗರ್ಭಪಾತ ನಡೆಸಿದರೆ ಬಾಲಕಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಬಾಲಕಿಯ ಅಂಗಾಂಗಳು ಸಂಪೂರ್ಣ ಬೆಳವಣಿಗೆ ಆಗಿರದ ಕಾರಣ ಪೂರ್ಣಾವಧಿಯ ಗರ್ಭಧಾರಣೆ ಬಾಲಕಿಯ ಜೀವಕ್ಕೆ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ವಕೀಲ ಅಲೋಕ್ ಶ್ರೀವಾಸ್ತವ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಚಂಡೀಗಡದ ಬಡಕುಟುಂಬಕ್ಕೆ ಸೇರಿದ ಈ ಬಾಲಕಿಯ ಮೇಲೆ ಆಕೆಯ ಮಾವ ನಿರಂತರವಾಗಿ ಅತ್ಯಾಚಾರ ನಡೆಸಿದ್ದ. ಒಂದು ದಿನ ಬಾಲಕಿ ಹೊಟ್ಟೆನೋವು ಎಂದು ತಿಳಿಸಿದಾಗ ಹೆತ್ತವರು ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ತಪಾಸಣೆಯ ಸಂದರ್ಭ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಜುಲೈ 18ರಂದು ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿಯ ಹೆತ್ತವರು ಸಲ್ಲಿಸಿದ್ದ ಅರ್ಜಿಯನ್ನು ಚಂಡೀಗಡ ಜಿಲ್ಲಾ ನ್ಯಾಯಾಲಯ ತಳ್ಳಿ ಹಾಕಿತ್ತು.







