ಲೈಟ್ ಹೌಸ್ ರಸ್ತೆಗೆ ಸುಂದರ ಶೆಟ್ಟಿ ಹೆಸರಿಡಲು ಆಗ್ರಹ
ಬೆಂಗಳೂರು, ಜು.24: ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಎಂದು ನಾಮಕರಣ ಮಾಡುವುದಕ್ಕೆ ಹಾಕಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ವಿಜಯ ಬ್ಯಾಂಕ್‌ನ ನಿವೃತ್ತರ ಸಂಘ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ನಾಯ್ಕಿ, ಲೈಟ್ ಹೌಸ್ ರಸ್ತೆಗೆ ವಿಜಯ ಬ್ಯಾಂಕಿನ ಅಧ್ಯಕ್ಷರಾಗಿದ್ದ ಮುಲ್ಕಿ ಸುಂದರ ರಾಮಶೆಟ್ಟರ ಹೆಸರು ನಾಮಕರಣ ಮಾಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರಿಂದ ಮನವಿಗಳನ್ನು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಾಲಿಕೆ, ಸರಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿತ್ತು. ಅಲ್ಲದೆ, ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಮೇ.24, 2017 ರಂದು ಈ ರಸ್ತೆಗೆ ಮುಲ್ಕಿ ಸುಂದರ ರಾಮಶೆಟ್ಟಿ ರಸ್ತೆ ನಾಮಕರಣ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಹೆಸರು ನಾಮಕರಣ ಮಾಡಲು ಪಾಲಿಕೆ ಸಾರ್ವಜನಿಕರಿಂದ ಅಹವಾಲು ಪಡೆದು ಯಾವುದೇ ರೀತಿಯ ವಿರೋಧ ಬರದಿದ್ದರಿಂದ 2017ರ ಜು. 2 ರಂದು ನಾಮಕರಣ ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಆದರೆ, ಜು.1 ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ವರ್ಗ ಮತು ಸ್ಥಳೀಯ ಶಾಸಕರು ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿ, ಈ ಹೆಸರು ನಾಮಕರಣ ಮಾಡುವುದರಿಂದ ಅಶಾಂತಿ ಉಂಟಾಗುತ್ತದೆ ಎಂದು ದೂರು ನೀಡಿ, ಇದಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಮೂಲಕ ಮುಲ್ಕಿ ಸುಂದರ ರಾಮಶೆಟ್ಟಿಗೆ ಹೆಸರಿಗೆ ಅಪಮಾನ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.
ಹೀಗಾಗಿ, ಕೂಡಲೇ ಅನಗತ್ಯ ಹಾಗೂ ರಾಜಕೀಯಕ್ಕೆ ಈ ಹೆಸರನ್ನು ಬಳಸಿಕೊಳ್ಳದೆ ಸರಕಾರ ನೀಡಿರುವ ಆದೇಶದಂತೆ ಈ ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಶಾಸಕರು ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆ.ಎ.ಚಂದ್ರಶೇಖರ್, ರಂಗನಾಥಯ್ಯ ಉಪಸ್ಥಿತರಿದ್ದರು.







