ಪಾರಂಪರಿಕ ವೈದ್ಯರ ಸೇವೆ ಮುಂದುವರಿಕೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜು.24: ಅನುಭವಿ ಮತ್ತು ಪಾರಂಪರಿಕ ವೈದ್ಯರುಗಳ ಸೇವೆ ಮುಂದುವರಿಕೆಗೆ 2ತಿಂಗಳೊಳಗೆ ಅವಕಾಶ ಕಲ್ಪಿಸಲು ಆದೇಶ ಹೊರಡಿಸುವಂತೆ ಹೈಕೋಟ್ ಆದೇಶ ನೀಡಿದೆ. ಇದರಿಂದಾಗಿ ನಕಲಿ ವೈದ್ಯರೆಂಬ ಹಣೆಪಟ್ಟಿಯಿಂದ ಮುಕ್ತಿ ಪಡೆದಂತಾಗಿದೆ ಎಂದು ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘ ತಿಳಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಸಂಯೋಜಕ ಬಿ.ಎಸ್.ಚಂದ್ರು, ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007-2009ರ ಕಾಯಿದೆಯಂತೆ ನಿಗದಿಪಡಿಸಲಾದ ವಿದ್ಯಾರ್ಹತೆಯಿಲ್ಲದ ಕಾರಣ ರಾಜ್ಯದಲ್ಲಿ ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರುಗಳ ಸೇವೆ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಹೇಳಿದರು.
ಆದರೆ, ಹೈಕೋಟ್ ಆದೇಶ ನೀಡಿ ವೈದ್ಯರ ಸಂಘದ ಬೇಡಿಕೆಗಳನ್ನು 2 ತಿಂಗಳೊಳಗೆ ಈಡೇರಿಸುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ. ಇದರಿಂದಾಗಿ ವೈದ್ಯಕೀಯ ಅಧಿನಿಯಮ 3 ರಂತೆ ನೋಂದಣಿ, ನಿಯಮ 15 ರಂತೆ ನೋಂದಣಿ ನಿರಾಕರಣೆ ಮತ್ತು ನಿಯಮ 19 ರ ಅನುಸಾರ ದಂಡ ಈ ಸಮಸ್ಯೆಗಳು ನ್ಯಾಯಾಲಯದ ತೀರ್ಪಿನಿಂದಾಗಿ ತಪ್ಪಿದಂತಾಗಿದೆ ಎಂದರು.
ರಾಜ್ಯದಲ್ಲಿ 2 ರಿಂದ 3 ಸಾವಿರ ಅನರ್ಹ ವೈದ್ಯರುಗಳಿದ್ದು, ಸೂಕ್ತ ತರಬೇತಿ, ಅನುಭವ, ವಿದ್ಯಾರ್ಹತೆಗಳ ಆಧಾರದಲ್ಲಿ ಸೇವೆ ಮುಂದುವರಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದ ಅವರು, ಕೆಲವು ಇಲಾಖಾ ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುವುದು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಹಾಗೂ ನಕಲಿ ವೈದ್ಯರು ಎಂಬ ಪದ ಬಳಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.







