ಪೌರ ಕಾರ್ಮಿಕರ ಎರಡನೆ ತಂಡ ನಾಳೆ ಸಿಂಗಾಪುರಕ್ಕೆ ಪ್ರವಾಸ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು, ಜು. 24: ಘನತ್ಯಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆ, ಶುಚಿತ್ವ ಹಾಗೂ ನೈರ್ಮಲ್ಯದ ಬಗ್ಗೆ ಅಧ್ಯಯನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 39 ಮಂದಿ ಪೌರ ಕಾರ್ಮಿಕರ ಎರಡನೆ ತಂಡ ನಾಳೆ(ಜು.25) ಬೆಳಗ್ಗೆ ಸಿಂಗಾಪುರ ಪ್ರವಾಸ ಕೈಗೊಳ್ಳಲಿದೆ ಎಂದು ಪೌರಾಡಳಿತ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ಹಸ್ತಾಂತರ ಮಾಡಿದರು. ಅಲ್ಲದೆ, ಅಧ್ಯಯನ ಪ್ರವಾಸ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಸಿಂಗಾಪುರಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲಿರುವ 39 ಮಂದಿ ಪೌರ ಕಾರ್ಮಿಕರ ತಂಡದೊಂದಿಗೆ ಮೂರು ಮಂದಿ ಅಧಿಕಾರಿಗಳು ತೆರಳಲಿದ್ದಾರೆ ಎಂದ ಅವರು, ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಅಧ್ಯಯನ ತಂಡ, ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆಗಳಿಗೆ ಭೇಟಿ ನೀಡಲಿದೆ ಎಂದರು.
ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆ ಸಿಂಗಾಪುರದಲ್ಲಿನ ಯುನೈಟೆಡ್ ನೇಷನ್‌ನ ಅಂಗ ಸಂಸ್ಥೆಯಾದ ಡಬ್ಲೂಟಿಓ ಸಹಯೋಗದೊಂದಿಗೆ ಪ್ರವಾಸದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದ ಅವರು, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಅಲ್ಲಿನ ತಾಂತ್ರಿಕತೆಯನ್ನು ಅಧ್ಯಯನ ನಡೆಸಿ, ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಸಿಂಗಾಪುರ ಪ್ರವಾಸಕ್ಕಾಗಿ ಪ್ರತಿಯೊಬ್ಬ ಪೌರ ಕಾರ್ಮಿಕನಿಗೆ 75 ಸಾವಿರ ರೂ.ವೆಚ್ಚವಾಗಲಿದ್ದು, ಆ ಪೈಕಿ 5 ಸಾವಿರ ರೂ. ವೈಯಕ್ತಿಕ ಖರ್ಚು-ವೆಚ್ಚಕ್ಕೆ ನೀಡಲಾಗುವುದು ಎಂದ ಅವರು, ಈ ತಂಡಕ್ಕೆ ಒಟ್ಟಾರೆ ಸುಮಾರು 30 ಲಕ್ಷ ರೂ.ಗಳಷ್ಟು ವೆಚ್ಚವಾಗಲಿದೆ ಎಂದು ಹೇಳಿದರು.
ಪೌರ ಕಾರ್ಮಿಕರ ಅಧ್ಯಯನ ಪ್ರವಾಸ ಸುಖಕರ ಮತ್ತು ಸುರಕ್ಷಿತವಾಗಿರಲಿದ್ದು, ಆ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಂಗಾಪುರ ಭೇಟಿ, ಅಲ್ಲಿನ ವಾಸ್ತವ್ಯ ಮತ್ತು ವಾಪಸ್ ಕರೆತರಲು ಇಲಾಖೆಯ ಮೂವರು ಅಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.







