ನಾಲೆಗೆ ನೀರು ಬಿಡುವಂತೆ ಆಗ್ರಹಿಸಿ ರೈತರಿಂದ ರಸ್ತೆತಡೆ

ಮಂಡ್ಯ, ಜು.24: ವಿಶ್ವೇಶ್ವರಯ್ಯ ಮತ್ತು ಹೇಮಾವತಿ ನಾಲೆಗಳಿಗೆ ಕೂಡಲೇ ನೀರು ಬಿಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲೆಯ ವಿವಿಧೆಡೆ ರೈತಸಂಘದ ಕಾರ್ಯಕರ್ತರು ರಸ್ತೆತಡೆ ನಡೆಸಿದರು.ಪಾಂಡವಪುರ, ಶ್ರೀರಂಗಪಟ್ಟಣ, ಕೃಷ್ಣರಾಜಪೇಟೆ, ಮೇಲುಕೋಟೆಯಲ್ಲಿ ರಸ್ತೆತಡೆದ ರೈತರು, ಸರಕಾರ, ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಾಂಡವಪುರ: ಜಿಪಂ ಮಾಜಿ ಸದಸ್ಯರಾದ ಎ.ಎಲ್.ಕೆಂಪೂಗೌಡ ಮತ್ತು ಕೆ.ಟಿ.ಗೋವಿಂದೇಗೌಡ ನೇತೃತ್ವದಲ್ಲಿ ಪಾಂಡವಪುರದ ಐದು ದೀಪದ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಯಿತು.
ಎ.ಎಲ್.ಕೆಂಪೂಗೌಡ ಮಾತನಾಡಿ, ಭತ್ತದ ಸಸಿ ಬಿಡುವ ಕಾಲ ಮುಗಿಯುತ್ತಾ ಬಂದಿದೆ. ನಾಲೆ ನೀರುಹರಿಸದಿದ್ದರೆ ಭತ್ತದ ಬೇಸಾಯ ಮಾಡಲು ಆಗುವುದಿಲ್ಲ. ಆದ್ದರಿಂದ ಕೂಡಲೇ ನೀರುಹರಿಸಬೇಕೆಂದು ಒತ್ತಾಯಿಸಿದರು.
ಪಿಎಸ್‌ಎಸ್‌ಕೆ ಉಪಾಧ್ಯಕ್ಷ ಹರವು ಪ್ರಕಾಶ್ ಮಾತನಾಡಿ, ಕೆಆರ್‌ಎಸ್ ಜಲಾಶಯಕ್ಕೆ ಪ್ರತಿನಿತ್ಯ ಐದು ಸಾವಿರ ಕ್ಯುಸೆಕ್ಸ್‌ಗಿಂತಲೂ ಹೆಚ್ಚು ನೀರು ಹರಿದು ಬರುತ್ತಿದ್ದು, 90 ಅಡಿಗಿಂತಲೂ ಹೆಚ್ಚು ನೀರು ಸಂಗ್ರಹವಿದೆ. ಆದರೆ, ನಾಲೆಗೆ ನೀರು ಬಿಡದೆ ತಮಿಳುನಾಡಿಗೆ ಬಿಡಲಾಗುತ್ತಿದೆ ಎಂದು ಕಿಡಿಕಾರಿದರು.
ಕೆನ್ನಾಳು ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಇಂಜಿನಿಯರ್ ಯೋಗಶ್, ನರಸಿಂಹೇಗೌಡ, ತಾಪಂ ಸದಸ್ಯ ನವೀನ, ವೈಪಿ ಮಂಜುನಾಥ, ಚನ್ನಕೇಶವ, ಅನಿಲ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶ್ರೀರಂಗಪಟ್ಟಣ: ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿ ಮಾತನಾಡಿದ ರೈತಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ, ಮುಖ್ಯಮಂತ್ರಿ, ನೀರಾವರಿ ಸಚಿವರು ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಲಾಶಯಕ್ಕೆ ಸ್ವಲ್ಪವೇ ನೀರುಬರುತ್ತಿದ್ದರೂ ಸಂಗ್ರಹಿಸದೆ ತಮಿಳುನಾಡಿಗೆ ಹರಿಸುವ ಮೂಲಕ ರೈತವಿರೋಧಿ ನೀತಿ ಅನುಸರಿಸಲಾಗುತ್ತಿದೆ. ನಾಲೆಗಳಿಗೆ ನೀರುಹರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಪಾಂಡು, ಉಂಡುವಾಡಿ ಮಹದೇವು, ಎಂ.ವಿ.ಕೃಷ್ಣ,ಬಿ.ಸಿ ಕೃಷ್ಣೇಗೌಡ, ರಾಮಕೃಷ್ಣ, ಬಿ.ಎಸ್.ರಮೇಶ್, ಬಾಬು, ನಂಜುಂಡಪ್ಪ ಇತರರು ಭಾಗವಹಿಸಿದ್ದರು.
ಕೃಷ್ಣರಾಜಪೇಟೆ: ಹೇಮಾವತಿ ಜಲಾಶಯದ ಕೆಳಭಾಗದ ತಾಲೂಕಿನ ಅಣೆಕಟ್ಟೆಗಳ ನಾಲೆಗಳಿಗೆ ಹಾಗೂ ಕೆರೆ, ಕೆಟ್ಟಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಟಿಬಿ ವೃತ್ತದ ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ತಡೆ ನಡೆಸಲಾಯಿತು.
ಮಾಜಿ ಜಿಲ್ಲಾ ಅಧ್ಯಕ್ಷ ಎಂ.ವಿ.ರಾಜೇಗೌಡ, ಮುಖಂಡರಾದ ಜಗಣ್ಣ, ಸಿಂಧಘಟ್ಟ ಮುದ್ದುಕುಮಾರ್, ತಾಲೂಕು ಅಧ್ಯಕ್ಷ ಶಂಕರ್, ಕರೋಟಿ ತಮ್ಮಯ್ಯ, ನೀತಿಮಂಗಲ ಮಹೇಶ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







