ಪೊಲೀಸ್ ದೂರು ಪ್ರಾಧಿಕಾರ ಕುರಿತು ಅರಿವು

ಮಂಡ್ಯ, ಜು.24: ಪೊಲೀಸ್ ದುರ್ವರ್ತನೆಯ ವಿರುದ್ಧ ದೂರು ಪ್ರಾಧಿಕಾರ ರಚನೆಯಾಗಿದ್ದು, ಕರ್ತವ್ಯಲೋಪವೆಸಗಿದ ಪೊಲೀಸರ ವಿರುದ್ಧ ದೂರು ಸಲ್ಲಿಸಲು ಪ್ರಾಧಿಕಾರದ ಅಧ್ಯಕ್ಷ ಹಾಗೂ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅರವಿಂದ್ ಶಿವನಗೌಡ ಪಚ್ಚೆಪೂರಿ ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ಪೊಲೀಸ್ ದೂರು ಪ್ರಾಧಿಕಾರದ ಕುರಿತು ಸೋಮವಾರ ನಡೆದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರ ವಿರುದ್ಧ ದುರ್ವರ್ತನೆಯ ದೂರು ದಾಖಲಾದಲ್ಲಿ ಅವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಯಾರೇ ಆದರೂ ಪೊಲೀಸರು ದೂರು ಸ್ವೀಕರಿಸದೇ ಹೋದಲ್ಲಿ ಅಥವಾ ಪೊಲೀಸರ ಕಡೆಯಿಂದ ಅನ್ಯಾಯ ಅಥವಾ ದುರ್ವರ್ತನೆಯ ನಡವಳಿಕೆಯಿಂದ ದೌರ್ಜನ್ಯವಾದರೆ, ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸುವಂತೆ ಅವರು ಹೇಳಿದರು.
ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ವಿಜಯಕುಮಾರಿ, ಮನ್ಸೂರ್ ಅಹಮದ್ ಜಮಾನ್, ದಿನೇಶ್, ಪ್ರಾಧಿಕಾರದ ಎಂ.ಆರ್.ಕಾಂಬ್ಲೆ, ಜಿಲ್ಲಾಧಿಕಾರಿ ಎಸ್.ಝೀಯಾವುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ವಕೀಲರ ಸಂಘದ ಅಧ್ಯಕ್ಷ ಮರೀಗೌಡ, ಸಿ.ಡಿ.ಆಶಾ, ಬಸವಯ್ಯ, ಎಂ.ಗುರುಪ್ರಸಾದ್, ಇತರರು ಉಪಸ್ಥಿತರಿದ್ದರು.





