ಪಿಡಬ್ಲ್ಯೂಡಿ ಎಇ ಎಸಿಬಿ ಬಲೆಗೆ
ಮಂಡ್ಯ, ಜು.24: ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಕಟ್ಟಡ ಬಾಡಿಗೆ ನವೀಕರಣಕ್ಕೆ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಭ್ರಚ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಮಲ್ಲರಾಜು ಎಸಿಬಿ ಬಲೆಗೆ ಬಿದ್ದವರು. ಇವರು ಕಟ್ಟಡದ ಮಾಲಕ ಬಿ.ಡಿ.ಕೃಷ್ಣಪ್ಪ ಅವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಬಂಧಿಸಿದರು.
ಶ್ರೀರಂಗಪಟ್ಟಣ ತಾಲೂಕು ಬೆಳಗೊಳದ ಬಿ.ಡಿ.ಕೃಷ್ಣಪ್ಪ ಅವರ ಕಟ್ಟಡವನ್ನು ವಸತಿ ನಿಲಯಕ್ಕೆ ಬಾಡಿಗೆ ಪಡೆದಿದ್ದು, ಅದರ ನವೀಕರಣಕ್ಕೆ ಕೃಷ್ಣಪ್ಪರಿಂದ ಮಲ್ಲರಾಜು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಕೃಷ್ಣಪ್ಪ ಎಸಿಬಿಗೆ ದೂರು ನೀಡಿದ್ದರು. ಮೈಸೂರಿನ ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಡಿವೈಎಸ್ಪಿ ಶೈಲೇಂದ್ರ, ಇನ್ಸ್‌ಪೆಕ್ಟರ್ ವಿನಯ್, ವೆಂಕಟೇಶ್, ಮಹೇಶ್, ಶಿವಕುಮಾರ್ ದಾಳಿ ನಡೆಸಿದರು.
Next Story





