ಕನ್ನಡ ಚಲನಚಿತ್ರೋತ್ಸವಕ್ಕೆ ತೆರೆ

ಬೆಂಗಳೂರು, ಜು.24: ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ಚಲನಚಿತ್ರ ಸಂಘಗಳ ಒಕ್ಕೂಟದೊಂದಿಗೆ ಕೋಲ್ಕತ್ತಾದ ನಂದನ್ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವ ಇಂದು ತೆರೆ ಕಂಡಿತು.
ಈ ವೇಳೆ ಮಾತನಾಡಿದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕನ್ನಡ ಮತ್ತು ಬೆಂಗಾಲಿ ಸಿನಿಮಾಗಳಿಗೆ ಒಂದು ಸಾಂಸ್ಕೃತಿಕತೆಯ ಕೊಂಡಿ ಇದೆ. ಕೋಲ್ಕತ್ತಾ ಚಲನಚಿತ್ರಗಳ ತವರೂರಾಗಿದ್ದು, ಇಲ್ಲಿ ಚಿತ್ರಗಳನ್ನು ನೋಡಲು ಬೆಂಗಳೂರಿನಿಂದ ಬರುತ್ತಿದ್ದರು ಎಂದು ಹೇಳಿದರು.
ಹಿಂದೂಸ್ಥಾನಿ ಸಂಗೀತದ ಬೇರುಗಳು ಕರ್ನಾಟಕದಲ್ಲಿದ್ದರೆ, ಬೆಂಗಾಲಿಗಳು ಅದನ್ನು ಆಸ್ವಾದಿಸುವ ಜನರಾಗಿದ್ದಾರೆ. ಕನ್ನಡಿಗರು ಮತ್ತು ಬೆಂಗಾಲಿಗರದು ಶ್ರೀಮಂತ ಸಂಸ್ಕೃತಿ. ಇಂತಹ ಚಿತ್ರೋತ್ಸವಗಳಿಂದ ಸಾಂಸ್ಕೃತಿಕ ನಿಮಯ ಮಾತ್ರವಲ್ಲದೆ, ಎರಡೂ ರಾಜ್ಯಗಳ ನಡುವೆ ಬಾಂಧವ್ಯವೂ ಹೆಚ್ಚುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ಕೋಲ್ಕತ್ತಾದಲ್ಲಿ ಸುಮಾರು 200 ಕ್ಕೂ ಹೆಚ್ಚು ಕನ್ನಡ ಕುಟುಂಬಗಳು ನೆಲೆಸಿದ್ದು, ಮೂರು ದಿನಗಳ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳನ್ನು ವೀಕ್ಷಿಸುವ ಅವಕಾಶದ ಜೊತೆಗೆ ತಮ್ಮ ನೆಚ್ಚಿನ ನಿರ್ದೇಶಕರನ್ನು ಭೇಟಿ ಮಾಡುವ ಅವಕಾಶವನ್ನೂ ಕಲ್ಪಿಸಿದ್ದು, ಇಂತಹ ಚಿತ್ರೋತ್ಸವಗಳನ್ನು ನಡೆಯುತ್ತಲೇ ಇರಬೇಕು ಎಂಬುದು ಅಲ್ಲಿನ ಕನ್ನಡಿಗರ ಅಭಿಪ್ರಾಯವಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಪಶ್ಚಿಮ ಬಂಗಾಲದ ವಾರ್ತಾ ಮತ್ತು ಪ್ರಸಾರ ಸಚಿವ ಬ್ರತ್ಯ ಬಸು, ಸಂಸದೆ ಹಾಗೂ ಖ್ಯಾತ ನಟಿ ಮೂನ್ ಮೂನ್ ಸೇನ್ ಉಪಸ್ಥಿತರಿದ್ದರು. ಮೂರು ದಿನಗಳ ಚಿತ್ರೋತ್ಸವದಲ್ಲಿ ಅನನ್ಯಾ ಕಾಸರವಳ್ಳಿಯವರ ನಿರ್ದೇಶನದ ಹರಿಕಥಾ ಪ್ರಸಂಗ, ಬಿ.ಎಂ.ಗಿರಿರಾಜ್ ನಿರ್ದೇಶನದ ಅಮರಾವತಿ, ಪವನ್ ಕುಮಾರ್ ನಿರ್ದೇಶನದ ಯೂ ಟರ್ನ್, ಪೃಥ್ವಿ ಕೊಣನೂರು ನಿರ್ದೇಶನದ ರೈಲ್ವೆ ಚಿಲ್ಡ್ರನ್, ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ, ಡಿ.ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ ಚಿತ್ರಗಳನ್ನು ಪ್ರದರ್ಶಿಸಲಾಯಿತು.







