ಉದ್ಯೋಗ ಸೃಷ್ಟಿಯಲ್ಲಿ ಮೋದಿ ವಿಫಲ: ಶಾಸಕ ಹಾರಿಸ್
ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಬೆಂಗಳೂರು, ಜು.24: ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಯುವಕರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಶಾಸಕ ಎನ್.ಎ.ಹಾರಿಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಶಾಂತಿನಗರದ ಮೈದಾನದಲ್ಲಿ ಎನ್.ಎ.ಹಾರಿಸ್ ಫೌಂಡೇಷನ್ ಮತ್ತು ಆಹನ ಸಿಸ್ಟಮ್ಸ್ ಮತ್ತು ಸಲ್ಯೂಷನ್ಸ್ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ಕೊಟ್ಟು ಅವರು ಮಾತನಾಡಿದರು.
ಚುನಾವಣೆಯ ಪ್ರಣಾಳಿಕೆಯಲ್ಲಿ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದ್ದ ಮೋದಿ ಅವರು, ಅಗತ್ಯ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಚುನಾವಣೆಯ ಪ್ರಣಾಳಿಕೆಯಲ್ಲಿ ಯುವಕರಿಗೆ ನೀಡಿದ ಆಸ್ವಾಸನೆಗಳಲ್ಲಿ ಇದುವರೆಗೂ ಒಂದೂ ಈಡೇರಿಲ್ಲ ಎಂದು ಕಿಡಿಕಾರಿದರು. ನಮ್ಮ ಸಾವಿರಾರು ಯುವಕರು ಉದ್ಯೋಗ ಹುಡುಕಾಟ ಮಾಡಿ ಸುಸ್ತಾಗಿದ್ದಾರೆ. ಕುಟುಂಬವನ್ನು ಪೋಷಣೆ ಮಾಡಲು ಹೆಣಗಾಡುತ್ತಿದ್ದಾರೆ. ಆದರೆ ಫೌಂಡೇಶನ್ ವತಿಯಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಮುಂದಿನ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಉದ್ಯೋಗಮೇಳವನ್ನು ನಡೆಸಲು ಯೋಚನೆ ರೂಪಿಸಲಾಗಿದೆ. ನಿರುದ್ಯೋಗಿ ಯುವಕರಿಗೆ ರಾಜ್ಯ ಸರಕಾರದ ವತಿಯಿಂದ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಉದ್ಯೋಗ ಸೃಷ್ಟಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
950 ಮಂದಿಗೆ ಉದ್ಯೋಗ: ನಗರದ ಶಾಂತಿನಗರದ ಮೈದಾನದಲ್ಲಿ ಶಾಸಕ ಎನ್.ಎ.ಹಾರಿಸ್ ಫೌಂಡೇಷನ್ ಮತ್ತು ಆಹನ ಸಿಸ್ಟಮ್ಸ್ ಮತ್ತು ಸಲ್ಯೂಷನ್ಸ್ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 950 ನಿರುದ್ಯೋಗಿ ಯುವಕರು ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.
ಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಯುವಜನರು ಪಾಲ್ಗೊಂಡಿದ್ದರು. 10ನೆ ತರಗತಿಯಿಂದ ಹಿಡಿದು, ಪಿಯುಸಿ, ಪದವಿ, ಐಟಿಐ, ಡಿಪ್ಲೋಮೊ ಸೇರಿದಂತೆ ಇತರೆ ವಿದ್ಯಾರ್ಹತೆಯುಳ್ಳ ನಿರುದ್ಯೋಗಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಿಗ್ ಬಜಾರ್, ರಿಲಾಯನ್ಸ್, ಡಿಜಿಟಲ್ಸ್ ಸಂಸ್ಥೆಗಳು ಸೇರಿದಂತೆ 25ಕ್ಕೂ ಅಧಿಕ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದವು.









