ಗಣೇಶೋತ್ಸವ ಆಚರಣೆಗಳು ಕೋಮು ಸಂಘರ್ಷ ನಿವಾರಿಸಲಿ: ಡಾ.ಶೆಣೈ

ಉಡುಪಿ, ಜು.24: ಗಣೇಶೋತ್ಸವ ಆಚರಣೆಗಳು ಸಾಮಾಜಿಕ ಪಿಡುಗುಗಳಾದ ಅಸ್ಪ್ರಶ್ಯತೆ, ಜಾತಿ ಪದ್ಧತಿ, ಕೋಮು ಸಂಘರ್ಷಗಳ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವಂತಾಗಬೇಕು ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಡಾ.ನಾರಾಯಣ್ ಶೆಣೈ ಹೇಳಿದ್ದಾರೆ.
ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಗಮ ಕಾರ್ಯಕ್ರಮದ ಪೂರ್ವಭಾವಿಯಾಗಿ ಪರ್ಕಳ ವಿಜ್ಞೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಂಘ ಸಂಸ್ಥೆಗಳ ಸಾಮರಸ್ಯ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಇಂದು ದೇಶಾದ್ಯಂತ ಪ್ರತಿವರ್ಷ ಸಾರ್ವಜನಿಕ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಅವುಗಳು ಸಮಾಜಕ್ಕೆ ನೀಡಿದ ಧನಾತ್ಮಕ ಪರಿಣಾಮಗಳ ಕುರಿತು ಗಂಭೀರ ಚಿಂತನೆ ನಡೆಸಬೇಕು. ಹೆಚ್ಚಿನ ಗಣೇಶೋತ್ಸವ ಗಳು ಸಾರ್ವಜನಿಕರ ದೇಣಿಗೆಗಳಿಂದ ವೈಭವಪೂರಿತವಾಗಿ ನಡೆಯುತ್ತದೆ. ಬದಲಾಗಿ ಸಮಾಜಕ್ಕೆ ಅದರ ಲಾಭ ಸಿಗಬೇಕೆಂಬ ಕನಿಷ್ಠ ಪರಿಜ್ಞಾನವೂ ಇರುವುದಿಲ್ಲ ಎಂದರು.
ಸ್ವಚ್ಛ ಪರಿಸರ, ಸಾವಯವ ಆಹಾರ ಸೇವನೆ, ಸ್ವದೇಶೀ ವಸ್ತುಗಳ ಉಪಯೋಗ, ಸಾಮಾಜಿಕ ಸಾಮರಸ್ಯ ಮತ್ತು ನೀರು, ವಿದ್ಯುತ್ ಇತ್ಯಾದಿ ಸಂಪನ್ಮೂಲಗಳ ಮಿತ ಬಳಕೆ ಈ ಪಂಚ ಸೂತ್ರಗಳ ಅಳವಡಿಕೆಯನ್ನು ಎಲ್ಲರೂ ಮಾಡಿಕೊಳ್ಳ ಬೇುಕು ಎಂದು ಅವರು ಸಲಹೆ ನೀಡಿದರು.
ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಸತೀಶ್ ಕಾಮತ್ ಸಾಮರಸ್ಯ ಸಮಾವೇಶವನ್ನು ಉದ್ಘಾಟಿಸಿದರು. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಗ್ರಾಮ ಸುರಕ್ಷಾ ಯೋಜನೆಯಡಿಯಲ್ಲಿ ಉಚಿತ ಪ್ರಧಾನ ಮಂತ್ರಿ ಸುರಕ್ಷಾ ವಿಮ ಯೋಜನೆಗೆ ಸೋಮಶೇಖರ್ ಭಟ್ ಚಾಲನೆ ನೀಡಿದರು. ಹರೀಶ್ ಜಿ. ಕಲ್ಮಾಡಿ ಉಚಿತ ವಿಮ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಯರಾಜ್ ಹೆಗ್ಡೆ, ಮಣಿಪಾಲ ವಿವಿ ಅಧಿಕಾರಿ ಜೈವಿಠಲ್, ಸಿಂಡಿಕೇಟ್ ಬ್ಯಾಂಕ್ನ ಉಪ ಮಹಾಪ್ರಬಂಧಕ ಎಸ್. ಎಸ್.ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಲತಿ ದಿನೇಶ್, ನಗರಸಭಾ ಸದಸ್ಯರಾದ ನರಸಿಂಹ ನಾಯಕ್, ಸುಕೇಶ್ ಕುಂದರ್, ಜ್ಯೋತಿ ನಾಯ್ಕ, ಆತ್ರಾಡಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಶೆಟ್ಟಿಗಾರ್, ಸಮಿತಿ ಕೋಶಾಧಿ ಕಾರಿ ಪ್ರಮೋದ್ ಕುವಾರ್ ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಗಣೇಶ್ ಪಾಟೀಲ್ ವಂದಿಸಿದರು. ಉಮೇಶ್ ಶಾನಭಾಗ್ ಕಾರ್ಯಕ್ರಮ ನಿರೂಪಿಸಿದರು.







