ಆಯೂಬ್ ಪಂಡಿತ್ ಹತ್ಯೆ ಪ್ರಕರಣ: 20 ಮಂದಿ ಆರೋಪಿಗಳ ಬಂಧನ

ಶ್ರೀನಗರ, ಜು. 24: ಶ್ರೀನಗರದಲ್ಲಿ ಕಳೆದ ತಿಂಗಳು ಗುಂಪು ಹಿಂಸೆಗೆ ಕಾಶ್ಮೀರದ ಡಿಎಸ್‌ಪಿ ಆಯೂಬ್ ಪಂಡಿತ್ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ಸೋಮವಾರ ಶ್ರೀನಗರದಲ್ಲಿ ತಿಳಿಸಿದ್ದಾರೆ.
ಜುಲೈ 12ರಂದು ಭದ್ರತಾ ಪಡೆ ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿ ಆಯೂಬ್ ಪಂಡಿತ್ ಅವರ ಹತ್ಯೆಗೆ ಕಾರಣನಾಗಿದ್ದ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಅವರು ಪ್ರಕರಣದ ತನಿಖೆಯ ಗತಿ-ಸ್ಥಿತಿ ಬಗ್ಗೆ ವರದಿ ನೀಡಿ ತಿಳಿಸಿದರು.
ಜೂನ್ 22ರಂದು ನಗರದ ನೌಹಟ್ಟಾದಲ್ಲಿರುವ ಮಸೀದಿಯ ಹೊರಭಾಗದಲ್ಲಿ ಪಂಡಿತ್ ಅವರನ್ನು ಥಳಿಸಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ. ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಇಂದುವರೆಗೆ 20 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಸಜಾದ್ ಅಹ್ಮದ್ ಗಿಲ್ಕಾರ್ ಬುಡ್ಗಾಂವ್‌ನ ರೆಡ್‌ಬಘ್‌ನಲ್ಲಿ ಜುಲೈ 12ರಂದು ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಖಾನ್ ತಿಳಿಸಿದ್ದಾರೆ.





