ಯು.ಆರ್.ರಾವ್ ಉಡುಪಿಯಿಂದ ಬಾಹ್ಯಾಕಾಶದೆತ್ತರಕ್ಕೆ ಬೆಳೆದ ಪ್ರತಿಭೆ

ಉಡುಪಿ, ಜು.24: ಬೆಂಗಳೂರಿನಲ್ಲಿ ಇಂದು ನಿಧನರಾದ ದೇಶದ ಖ್ಯಾತನಾಮ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಯು.ಆರ್. ರಾವ್ ಉಡುಪಿಯ ಪುಟ್ಟ ಹಳ್ಳಿ ಅದಮಾರಿನಿಂದ ತನ್ನ ಸತತ ಪರಿಶ್ರಮದ ಮೂಲಕವೇ ಬಾಹ್ಯಾಕಾಶದೆತ್ತರಕ್ಕೆ ಬೆಳೆದು ನಿಂತ ಪ್ರತಿಭೆ.
ಎಡನೀರು ಲಕ್ಷ್ಮಿನಾರಾಯಣ ಆಚಾರ್ಯ ಹಾಗೂ ಕೃಷ್ಣವೇಣಿ ದಂಪತಿಗಳ ಹಿರಿಯ ಮಗನಾಗಿ ಅದಮಾರಿನ ಅಜ್ಜನ ಮನೆಯಲ್ಲಿ 1930ರ ಮಾ.10ರಂದು ಜನಿಸಿದ ರಾಮಚಂದ್ರ ರಾವ್ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೂಡಅದಮಾರಿನ ಹಿಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದರು. ಮುಂದೆ ಅವರ ಹೈಸ್ಕೂಲ್ ಶಿಕ್ಷಣ ನಡೆದುದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ. ಅಡುಗೆ ವೃತ್ತಿಯ ತಂದೆ ಉಡುಪಿ ಮೂಡನಿಡಂಬೂರು ಗ್ರಾಮದಲ್ಲಿ ಮನೆ ಮಾಡಿದ್ದರು.
1944ರಲ್ಲಿ ಲಕ್ಷ್ಮಿನಾರಾಯಣ ಆಚಾರ್ಯರು ಈ ಮನೆಯನ್ನು ಮಾರಿ ಕೊರಂಗ್ರಪಾಡಿಯಲ್ಲಿ ಕೃಷಿ ಭೂಮಿ ಖರೀದಿಸಿ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದರು. ಮುಂದೆ ಯು.ಆರ್.ರಾವ್ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುತಿದ್ದಂತೆ ಕುಟುಂಬ ಬಳ್ಳಾರಿಗೆ ತೆರಳಿದ್ದು, ಅವರ ಕಾಲೇಜು ವಿದ್ಯಾಭ್ಯಾಸ ನಡೆದಿದ್ದು ಅಲ್ಲೇ. ಅಲ್ಲಿಂದ ಕಾಶಿಯ ಬನಾರಸ್ ಹಿಂದು ವಿವಿಯಲ್ಲಿ ಸ್ನಾತಕೋತ್ತರ, ಗುಜರಾತ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದು ಅಮೆರಿಕಕ್ಕೆ ತೆರಳಿ ಅಲ್ಲಿ ಎಂಐಟಿಯಲ್ಲೂ ಕಲಿತು ಬಾಹ್ಯಾಕಾಶ ವಿಜ್ಞಾನಿಯಾಗಿ ದೇಶಕ್ಕೆ ಮರಳಿ ತನ್ನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು ಈಗ ಇತಿಹಾಸ.
ಹೈಸ್ಕೂಲ್‌ವರೆಗಿನ ಶಿಕ್ಷಣದ ಬಳಿಕ ಯು.ಆರ್.ರಾವ್ ಅವರ ಉಡುಪಿ ನೆಂಟು ಹೆಚ್ಚು ಗಾಢವಾಗಿ ಮುಂದುವರಿಯಲ್ಲಿಲ್ಲ. ‘ಯು.ಆರ್.ರಾವ್ ಅವರ ತಂದೆ ಮೂಡನಿಡಂಬೂರಿನ ಜಾಗವನ್ನು ನನ್ನ ತಂದೆಗೆ ಮಾರಿ ಕೊರಂಗ್ರಪಾಡಿಯಲ್ಲಿ ಸ್ವಂತ ಮನೆ, ಜಾಗ ಮಾಡಿದರು. ಮುಂದೆ ಅಲ್ಲಿ ಅವರು ಕೃಷಿಕರಾಗಿ ಬದುಕಿದ್ದರು. 1978ರಲ್ಲಿ ತಂದೆ, ಮುಂದಿನ ವರ್ಷ ತಾಯಿ ತೀರಿಕೊಂಡಾಗ ಯು.ಆರ್.ರಾವ್ ಇಲ್ಲಿಗೆ ಬಂದಿದ್ದರು. ಅವರ ಕೊರಂಗ್ರಪಾಡಿ ಮನೆ ಈಗಲೂ ಇದ್ದು ಆದರೆ ಅದನ್ನು ಮಾರಾಟ ಮಾಡಲಾಗಿದೆ.’ ಎಂದು ಪ್ರೊ.ರಾವ್ ಕುರಿತು ತಿಳಿದಿರುವ ಅವರ ನಿಕಟ ಸಂಬಂಧಿ, ಕಮ್ಯುನಿಸ್ಟ್ ನಾಯಕ ಅದಮಾರು ಶ್ರೀಪತಿ ಆಚಾರ್ಯ ತಿಳಿಸಿದರು.
ಪ್ರೊ.ಯು.ಆರ್.ರಾವ್‌ಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಅವರಲ್ಲಿ ಒಬ್ಬರು ನಾಡಿನ ಖ್ಯಾತ ಆರ್ಥಿಕ ತಜ್ಞ ಡಾ.ಗೋವಿಂದರಾವ್. ಇನ್ನೊಬ್ಬರು ಕೃಷ್ಣಮೂರ್ತಿ ರಾವ್. ಕೃಷ್ಣಮೂರ್ತಿ ರಾವ್ ಉಡುಪಿಯಲ್ಲೆ ವಾಸವಾಗಿದ್ದರು ಎಂದವರು ವಿವರಿಸಿದರು.
ಪ್ರೊ.ರಾವ್ 2014ರಲ್ಲಿ ಸಂಸ್ಥಾಪಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಲು ಮಣಿಪಾಲಕ್ಕೆ ಆಗಮಿಸಿ, ಬಾಹ್ಯಾಕಾಶ ವಿಜ್ಞಾನ, ಮಂಗಳಯಾನ, ಅದಕ್ಕಿರುವ ಅವಕಾಶಗಳ ಕುರಿತು ಉಪನ್ಯಾಸ ನೀಡಿದ್ದರು. ಮತ್ತೊಮ್ಮೆ 2015ರ ಜನವರಿ ಎರಡನೇ ವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರ ಈ ದೇಶವನ್ನು ರಕ್ಷಿಸಬಹುದಲ್ಲದೇ ಉಳಿದ ಯಾವುದೂ ಅಲ್ಲ. ಆದುದರಿಂದ ವಿಜ್ಞಾನವನ್ನು ಆಳವಾಗಿ ಅಭ್ಯಸಿಸಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಕರೆ ನೀಡಿದ್ದರು.
ಯು.ಆರ್.ರಾವ್‌ಗೆ ನಿರೀಕ್ಷಿತ ಗೌರವ ಸಿಕ್ಕಿಲ್ಲ: ಪೇಜಾವರ ಶ್ರೀ
ಉಡುಪಿಯವರಾದ ದೇಶದ ಹೆಮ್ಮೆಯ ವಿಜ್ಞಾನಿ ಯು.ಆರ್.ರಾವ್ ಅವರಿಗೆ ಎಷ್ಟು ಗೌರವ ಸಿಗಬೇಕಿತ್ತೋ ಅಷ್ಟು ಗೌರವ ಸಿಕ್ಕಿಲ್ಲ. ಆದರೆ ಆ ಬಗ್ಗೆ ಈಗ ಚರ್ಚೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಅವರ ಸೇವೆಯನ್ನು ಸ್ಮರಿಸಿ ನಾವೆಲ್ಲರು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣ ಮಠದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಯು.ಆರ್.ರಾವ್ ಅವರ ಅನಿರೀಕ್ಷಿತ ನಿಧನ ಭಾರತೀಯರು, ಕನ್ನಡಿಗರಿಗೆ ಬಹಳಷ್ಟು ದುಃಖದ ಸಂಗತಿಯಾಗಿದೆ. ಇಂದು ಅವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಬೇಕೆಂದು ತೀರ್ಮಾನಿಸಿದ್ದೆ. ಅದಕ್ಕೆ ದೂರ ವಾಣಿ ಸಂಖ್ಯೆಯನ್ನು ಕೂಡ ತರಿಸಿ ಇಟ್ಟಿದ್ದೆ. ಅಷ್ಟರಲ್ಲಿ ಅವರು ನಿಧನರಾಗಿರುವ ಸುದ್ದಿ ಕೇಳಿ ತುಂಬಾ ಖೇಧವಾಯಿತು. ಪರ್ಯಾಯಕ್ಕೆ ಮೊದಲು ವಿಮಾನದಲ್ಲಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಅವರ ಮೇಲೆ ದೇವರ ಅನುಗ್ರಹ ಇರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ ಎಂದರು.
ಸಚಿವರ ಸಂತಾಪ
ಇಸ್ರೋದ ಮಾಜಿ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರ ನಿಧನಕ್ಕೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರೊ.ಯು.ಆರ್.ರಾವ್ ನಿಧನರಿಂದ ನಾಡಿಗೆ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಭಗವಂತನನು ಶಾಂತಿಯನ್ನು ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.










