ತುಂಬೆ: ಸೆಂಟ್ರಲ್ ಸ್ಕೂಲ್‌ನಲ್ಲಿ ರಕ್ಷಕ-ಶಿಕ್ಷಕ ಸಮಾವೇಶ

ಬಂಟ್ವಾಳ, ಜು. 24: ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಪಾಲಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ದಿನೇಶ ಶೆಟ್ಟಿ ಅಳಿಕೆ ಅಭಿಪ್ರಾಯಪಟ್ಟರು.
ತುಂಬೆ ಸೆಂಟ್ರಲ್ ಸ್ಕೂಲ್‌ನ ರಕ್ಷಕ-ಶಿಕ್ಷಕ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅವರು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಮಕ್ಕಳ ಭವಿಷ್ಯದ ಬಗ್ಗೆ ಸದಾ ಗಮನ ಹರಿಸುತ್ತಿರಬೇಕು. ಅಂತಹ ಮಕ್ಕಳ ಬದುಕು ಭವಿಷ್ಯದಲ್ಲಿ ಉಜ್ವಲವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಸರಿ-ತಪ್ಪುಗಳ ಕುರಿತಾಗಿ ತಿಳಿದು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, "ಜನನಿ ತಾನೇ ಮೊದಲ ಗುರು" ಎಂಬ ಮಾತಿನಂತೆ ಮಕ್ಕಳ ಅಭ್ಯುದಯದಲ್ಲಿ ತಾಯಿ ಪಾತ್ರ ದೊಡ್ಡದು. ನಂತರ ಶಿಕ್ಷಕರು, ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಪರಸ್ಪರ ಸಹಕಾರದಿಂದ ಮಕ್ಕಳನ್ನು ಮುನ್ನಡೆಸಬೇಕು ಎಂದರು. ಸಮಾವೇಶದಲ್ಲಿ ತುಂಬೆ ಸೆಂಟ್ರಲ್ ಸ್ಕೂಲ್‌ನ ಪ್ರಶಸ್ತಿ ಪರಸ್ಕೃತ ಶಿಕ್ಷಕಿ ಕವಿತಾ ಪ್ರಕಾಶ್ ಅಭಿನಂದನೆಗೆ ಕೃತಜ್ಞತಾ ಮಾತಗಳನ್ನಾಡಿದರು. ನಲುವತ್ತರಷ್ಟು ವಿದ್ಯಾರ್ಥಿಗಳನ್ನು ಪಿಟಿಎ ವತಿಯಿಂದ ನಗದು ದತ್ತಿ ಪುರಸ್ಕಾರಗಳನ್ನು ನೀಡಿ ಪುರಸ್ಕರಿಸಲಾಯಿತು.
ಸಂಸ್ಥಾಪಕರಾದ ಅಹ್ಮದ್ ಹಾಜಿ ಹಾಗೂ ಸಂಚಾಲಕ ಬಸ್ತಿ ವಾಮನ ಶೆಣೈ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಸಮಾವೇಶದಲ್ಲಿ ತುಂಬೆ ಸೆಂಟ್ರಲ್ ಸ್ಕೂಲ್‌ನ ನೂತನ ಸಮಿತಿಗೆ ಅಧ್ಯಕ್ಷರಾಗಿ ದೇವದಾಸ್ ತುಂಬೆ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀಮತಿ ವಿದ್ಯಾಕೆ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕ್ಕರ್, ಹಾಶೀರ್, ಗಿರೀಶ್ ಶೆಟ್ಟಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ತುಂಬೆ ಬಿ.ಎ. ಐಟಿಸಿ ಪ್ರಾಂಶುಪಾಲ ನವೀನ್ ಕುಮಾರ್ ರಕ್ಷಕರಾದವರ ಹೊಣೆಗಾರಿಕೆಯನ್ನು ಕುರಿತು ಮಾಹಿತಿ ನೀಡಿದರು.
ಪಿಟಿಎಯ ನಿರ್ಗಮನ ಅಧ್ಯಕ್ಷೆ ಉಮಾಚಂದ್ರಶೇಖರ್, ತುಂಬೆ ಸೆಂಟ್ರಲ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ. ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಶಿಕ್ಷಕಿ ರೇಷ್ಮಾ ಶೆಟ್ಟಿ ವಂದಿಸಿದರು. ಅಬ್ದುಲ್ ಕಬೀರ್ ಸಾಧಕರ ಪಟ್ಟಿ ವಾಚಿಸಿದರು. ಬಂಟ್ವಾಳ ತಾಲೂಕು ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಶಾಮಿಯತ್ ನುಸೈಬಾಳನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಯಕ್ಷಗಾನ ಕಲಾವಿದ ಪದ್ಮನಾಭ ಉಪಾಧ್ಯಾಯನಿರೂಪಿಸಿ, ಅಶೋಕ ಸಹಕರಿಸಿದರು.







