ವಿಶ್ವಕಪ್ ಗೆಲ್ಲಬೇಕೆಂಬ ಒತ್ತಡ ಸೋಲಿಗೆ ಕಾರಣವಾಯಿತು: ನಾಯಕಿ ಮಿಥಾಲಿ

ಲಂಡನ್, ಜು.24: ‘‘ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ತಂಡದ ಆಟಗಾರ್ತಿಯರು ಒತ್ತಡಕ್ಕೆ ಸಿಲುಕಿದ್ದರು. ಟ್ರೋಫಿ ಗೆಲ್ಲಲೇಬೇಕೆಂಬ ಒತ್ತಡ ತಂಡದ ಸೋಲಿಗೆ ಕಾರಣವಾಯಿತು’’ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ
ರವಿವಾರ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ಮೊದಲ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.
‘‘ಒತ್ತಡದ ಪರಿಸ್ಥಿತಿಗೆ ಹೊಂದಿಕೊಂಡು ಆಡಲು ತಂಡದ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ. ಅನುಭವದ ಕೊರತೆ ಇದ್ದರೂ, ಹೋರಾಟ ನಡೆಸಿದರು. ಆದರೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಗೆಲುವಿಗೆ 229 ರನ್‌ಗಳ ಸವಾಲನ್ನು ಪಡೆದ ಭಾರತ ಒಂದು ಹಂತದಲ್ಲಿ 191 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಗೆಲ್ಲುವ ಹಾದಿಯಲ್ಲಿತ್ತು. ಆದರೆ ಅಂತಿಮ 7 ವಿಕೆಟ್‌ಗಳು 28 ರನ್‌ಗಳಿಗೆ ಪತನಗೊಳ್ಳುವ ಮೂಲಕ ಭಾರತ ಎರಡನೆ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿತ್ತು. ಮಿಥಾಲಿ ರಾಜ್ ನೇತೃತ್ವದಲ್ಲಿ ಭಾರತ ಎರಡನೆ ಬಾರಿ ಫೈನಲ್‌ನಲ್ಲಿ ಸೋಲು ಅನುಭವಿಸಿದೆ. 2005ರಲ್ಲಿ ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ 98 ರನ್‌ಗಳ ಅಂತರದಲ್ಲಿ ಸೋತು ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಮುಗ್ಗರಿಸಿತ್ತು. 12 ವರ್ಷಗಳ ಬಳಿಕ ಎರಡನೆ ಬಾರಿ ಫೈನಲ್ ತಲುಪಿದರೂ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
‘‘ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಉಜ್ವಲ ಭವಿಷ್ಯವಿದೆ. ತಂಡದಲ್ಲಿ ಪ್ರತಿಭಾವಂತ ಆಟಗಾರ್ತಿಯರಿದ್ದಾರೆ’’ ಎಂದು ಮಿಥಾಲಿ ಹೇಳಿದ್ದಾರೆ.
34ರ ಹರೆಯದ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ಆಟಗಾರ್ತಿ. ಫೈನಲ್‌ನಲ್ಲಿ 13ನೆ ಓವರ್‌ನ ಮೊದಲ ಎಸೆತದಲ್ಲಿ ಅನಗತ್ಯವಾಗಿ ರನ್ ಗಳಿಸಲು ಹೋಗಿ ಮಿಥಾಲಿ ರನೌಟಾಗಿದ್ದರು.
ಮಧ್ಯಪ್ರದೇಶ ಸರಕಾರದಿಂದ 50 ಲಕ್ಷ ರೂ. ಬಹುಮಾನ
ವನಿತೆಯರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಸೋತರೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲಲು ಯಶಸ್ವಿಯಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಅದ್ದೂರಿ ಸನ್ಮಾನಕ್ಕೆ ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ರವಿವಾರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ 9 ರನ್‌ನಿಂದ ಸೋತು ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಭಾರತದ ಆಟಗಾರ್ತಿಯರು ಬುಧವಾರ ಸ್ವದೇಶಕ್ಕೆ ಆಗಮಿಸಲಿದ್ದಾರೆ. ಸನ್ಮಾನ ಸಮಾರಂಭದ ವೇಳೆ ಬಿಸಿಸಿಐ ವತಿಯಿಂದ ಎಲ್ಲ ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ.ಬಹುಮಾನ ನೀಡಲಾಗುತ್ತದೆ. ಸಹಾಯಕ ಸಿಬ್ಬಂದಿ ತಲಾ 25 ಲಕ್ಷ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಫೈನಲ್ ಪಂದ್ಯಕ್ಕೆ ಮೊದಲೇ ಬಿಸಿಸಿಐ ಬಹುಮಾನವನ್ನು ಘೋಷಿಸಿತ್ತು. ‘‘ಭಾರತ ಫೈನಲ್‌ನಲ್ಲಿ ಸೋತಿದ್ದರೂ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಬಿಸಿಸಿಐ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ದಿನ ನಿಗದಿಪಡಿಸಲು ಪ್ರಯತ್ನಿಸುತ್ತೇವೆ. 12 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ತಲುಪಿದ್ದ ಭಾರತ ತಂಡದ ಸಾಧನೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ’’ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.







