ಮಹಿಳಾ ತಂಡದ ಸನ್ಮಾನಕ್ಕೆ ಬಿಸಿಸಿಐ ಯೋಜನೆ

ಹೊಸದಿಲ್ಲಿ, ಜು.24: ವನಿತೆಯರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಸೋತರೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲಲು ಯಶಸ್ವಿಯಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಅದ್ದೂರಿ ಸನ್ಮಾನಕ್ಕೆ ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ರವಿವಾರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ 9 ರನ್‌ನಿಂದ ಸೋತು ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಭಾರತದ ಆಟಗಾರ್ತಿಯರು ಬುಧವಾರ ಸ್ವದೇಶಕ್ಕೆ ಆಗಮಿಸಲಿದ್ದಾರೆ.
ಸನ್ಮಾನ ಸಮಾರಂಭದ ವೇಳೆ ಬಿಸಿಸಿಐ ವತಿಯಿಂದ ಎಲ್ಲ ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ.ಬಹುಮಾನ ನೀಡಲಾಗುತ್ತದೆ. ಸಹಾಯಕ ಸಿಬ್ಬಂದಿ ತಲಾ 25 ಲಕ್ಷ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಫೈನಲ್ ಪಂದ್ಯಕ್ಕೆ ಮೊದಲೇ ಬಿಸಿಸಿಐ ಬಹುಮಾನವನ್ನು ಘೋಷಿಸಿತ್ತು. ‘‘ಭಾರತ ಫೈನಲ್‌ನಲ್ಲಿ ಸೋತಿದ್ದರೂ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಬಿಸಿಸಿಐ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ದಿನ ನಿಗದಿಪಡಿಸಲು ಪ್ರಯತ್ನಿಸುತ್ತೇವೆ. 12 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ತಲುಪಿದ್ದ ಭಾರತ ತಂಡದ ಸಾಧನೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ’’ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.





