ಶ್ರುಬ್ಸೋಲ್ ಇಂಗ್ಲೆಂಡ್‌ನ ಗೆಲುವಿನ ರೂವಾರಿ

ಲಂಡನ್, ಜು.24: ಮಧ್ಯಮ ವೇಗಿ ಅನಿಯಾ ಶ್ರುಬ್ಸೋಲ್ ಇಂಗ್ಲೆಂಡ್‌ಗೆ ಮಹಿಳಾ ವಿಶ್ವಕಪ್‌ನಲ್ಲಿ ಗೆಲುವು ತಂದು ಕೊಟ್ಟ ಸ್ಟಾರ್ ಬೌಲರ್.
25ರ ಹರೆಯದ ಶ್ರುಬ್ಸೋಲ್ 9.4 ಓವರ್‌ಗಳಲ್ಲಿ 46ಕ್ಕೆ 6 ವಿಕೆಟ್‌ಗಳನ್ನು ಉಡಾಯಿಸುವ ಮೂಲಕ ಭಾರತದ ಪಾಲಾಗಲಿದ್ದ ವಿಶ್ವಕಪ್‌ನ್ನು ಕಸಿದುಕೊಂಡಿದ್ದರು.
16ರ ಹರೆಯದಲ್ಲಿ ಇಂಗ್ಲೆಂಡ್ ತಂಡ ಪ್ರವೇಶಿಸಿದ್ದ ಶ್ರುಬ್ಸೋಲ್ 9 ವರ್ಷಗಳ ಹಿಂದೆ ಇಂಗ್ಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2008ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 8.3 ಓವರ್‌ಗಳಲ್ಲಿ 26ಕ್ಕೆ 1 ವಿಕೆಟ್ ಪಡೆದಿದ್ದರು.
10 ದಿನಗಳ ಬಳಿಕ ದಕ್ಷಿಣ ಆಫ್ರಿಕ ವಿರುದ್ಧ ಆಡಿದ್ದ ಟ್ವೆಂಟಿ-20 ಪಂದ್ಯದಲ್ಲಿ 4 ಓವರ್‌ಗಳಲ್ಲಿ 19 ಕ್ಕೆ 3 ವಿಕೆಟ್ ಉಡಾಯಿಸಿದ್ದರು. ಇಂಗ್ಲೆಂಡ್‌ಗೆ 3-0 ಅಂತರದಲ್ಲಿ ಸರಣಿ ಗೆಲುವಿಗೆ ನೆರವಾಗಿದ್ದರು. 2009ರ ವಿಶ್ವಕಪ್‌ನಲ್ಲಿ ದೊಡ್ಡ ಸಾಧನೆ ಮಾಡಲಿಲ್ಲ. ಮತ್ತೆ ಎರಡು ವರ್ಷಗಳಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. 2013ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಶ್ರುಬ್ಸೋಲ್ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡರು. ಶ್ರೀಲಂಕಾ ವಿರುದ್ಧ ಅವರಿಗೆ ಅವಕಾಶ ಸಿಗಲಿಲ್ಲ. ಆದರೆ ಎರಡನೆ ಪಂದ್ಯದಲ್ಲಿ ಭಾರತದ ವಿರುದ್ಧ 1 ವಿಕೆಟ್ ಪಡೆದರು. ಮುಂದಿನ ಮೂರು ಪಂದ್ಯಗಳಲ್ಲಿ 12 ವಿಕೆಟ್ ಪಡೆದರು. ಇಂಗ್ಲೆಂಡ್ ಪ್ಲೇ-ಆಫ್‌ನಲ್ಲಿ ನ್ಯೂಝಿಲೆಂಡ್‌ನ್ನು ಮಣಿಸಿ ಮೂರನೆ ಸ್ಥಾನ ಪಡೆದಿತ್ತು.
ಶ್ರುಬ್ಸೊಲ್ ಟ್ವೆಂಟಿ-20 ವಿಶ್ವ್ವಕಪ್‌ನಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದರು. ಕಳೆದ ವರ್ಷ ತಂಡದ ಉಪನಾಯಕಿಯಾಗಿ ಭಡ್ತಿ ಪಡೆದಿದ್ದರು. 2017ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 49.4ನೆ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಇಂಗ್ಲೆಂಡ್‌ನ್ನು ಫೈನಲ್ ತಲುಪಿಸಿದ್ದರು. ಆಗ 8 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು. ಫೈನಲ್‌ನಲ್ಲಿ ಅವರು 6 ವಿಕೆಟ್ ಪಡೆದರು.
ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ದಾರಿ ತೋರಿಸಿದ ಶ್ರುಬ್ಸೊಲ್ ಇಂಗ್ಲೆಂಡ್‌ಗೆ ಮೊದಲ ಯಶಸ್ಸು ತಂದು ಕೊಟ್ಟರು. ಇಂಗ್ಲೆಂಡ್ ವಿರುದ್ಧ ಅವರು ಮೊದಲ ಪಂದ್ಯದಲ್ಲಿ 90 ರನ್ ಗಳಿಸಿದ್ದರು. ಹರ್ಮನ್‌ಪೀತ್ ಕೌರ್ ಅವರನ್ನು ಹಾರ್ಟ್ಲಿ (51) ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಶ್ರುಬ್ಸೊಲ್ ಅವರದ್ದೇ ಆಟ. ಭಾರತದ ವಿಶ್ವಕಪ್ ಗೆಲ್ಲುವ ಕನಸನ್ನು ಮಣ್ಣುಗೂಡಿಸಿದರು.







