ಐಸಿಸಿ ವಿಶ್ವಕಪ್ ತಂಡಕ್ಕೆ ಮಿಥಾಲಿ ನಾಯಕಿ

ಲಂಡನ್, ಜು.24: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಮಹಿಳೆಯರ ಐಸಿಸಿ ವಿಶ್ವಕಪ್ ತಂಡಕ್ಕೆ ಭಾರತದ ಮಿಥಾಲಿ ರಾಜ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರವಿವಾರ ಕೊನೆಗೊಂಡಿರುವ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತದ ನಾಯಕಿಯಾಗಿದ್ದ 34ರ ಹರೆಯದ ಮಿಥಾಲಿ ಐಸಿಸಿ ಮಹಿಳಾ ತಂಡಕ್ಕೆ ಸೋಮವಾರ ನಾಯಕಿಯಾಗಿ ಆಯ್ಕೆಯಾದರು. ಲಾರ್ಡ್ಸ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಭಾರತ 9 ರನ್‌ಗಳಿಂದ ಸೋತಿತ್ತು. 30 ದಿನಗಳ ಕಾಲ ನಡೆದಿದ್ದ ಟೂರ್ನಮೆಂಟ್‌ನಲ್ಲಿ ತಂಡವನ್ನು ಮಾದರಿಯಾಗಿ ಮುನ್ನಡೆಸಿದ್ದ ಮಿಥಾಲಿ ಒಟ್ಟು 409 ರನ್ ಗಳಿಸಿದ್ದರು.
ನ್ಯೂಝಿಲೆಂಡ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 109 ರನ್ ಗಳಿಸಿ ತಂಡವನ್ನು ಸೆಮಿ ಫೈನಲ್‌ಗೆ ತಲುಪಿಸಿದ್ದ ಮಿಥಾಲಿ ಇಂಗ್ಲೆಂಡ್ ವಿರುದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ 71 ರನ್ ಗಳಿಸಿದ್ದರು. ವಿಂಡೀಸ್ ವಿರುದ್ಧ 46, ಶ್ರೀಲಂಕಾ ವಿರುದ್ಧ 53 ಹಾಗೂ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ನಲ್ಲಿ 69 ರನ್ ಗಳಿಸಿದ್ದರು. ಮಿಥಾಲಿಯವರಲ್ಲದೆ ಭಾರತದ ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಮಿಥಾಲಿ, ಟೇಲರ್ ಹಾಗೂ ಶ್ರುಬ್ಸೊಲ್ 2ನೆ ಬಾರಿ ಐಸಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಐಸಿಸಿ ಮಹಿಳಾ ತಂಡ(ಬ್ಯಾಟಿಂಗ್ ಕ್ರಮಾಂಕ): ತಮ್ಸಿನ್ ಬಿವೌಂಟ್ (ಇಂಗ್ಲೆಂಡ್, 410 ರನ್), ಲೌರಾ ವಾಲ್ವಾರ್ಡ್(ದ. ಆಫ್ರಿಕ-324 ರನ್), ಮಿಥಾಲಿ ರಾಜ್(ನಾಯಕಿ, 409 ರನ್), ಎಲ್ಸಿ ಪೆರ್ರಿ(ಆಸ್ಟ್ರೇಲಿಯ, 404 ರನ್, 9 ವಿಕೆಟ್), ಸಾರಾ ಟೇಲರ್(ವಿಕೆಟ್‌ಕೀಪರ್, ಇಂಗ್ಲೆಂಡ್, 396 ರನ್), ಹರ್ಮನ್‌ಪ್ರೀತ್ ಕೌರ್(ಭಾರತ,359 ರನ್, 5 ವಿಕೆಟ್), ದೀಪ್ತಿ ಶರ್ಮ(ಭಾರತ, 216 ರನ್, 12 ವಿಕೆಟ್), ಮರಿಝಾನ್ ಕಾಪ್(ದ.ಆಫ್ರಿಕ, 13 ವಿಕೆಟ್), ಡೇನ್ ವ್ಯಾನ್ ನೀಕಿರ್ಕ್(ದ.ಆಫ್ರಿಕ, 99 ರನ್, 15 ವಿಕೆಟ್), ಅನಿಯಾ ಶ್ರುಬ್ಸೊಲ್(ಇಂಗ್ಲೆಂಡ್, 12 ವಿಕೆಟ್), ಅಲೆಕ್ಸ್ ಹಾರ್ಟ್ಲಿ(ಇಂಗ್ಲೆಂಡ್, 10 ವಿಕೆಟ್), ನಟಾಲಿ ಸಿವೆರ್(ಇಂಗ್ಲೆಂಡ್, 369 ರನ್, 7 ವಿಕೆಟ್).







