ವೈದ್ಯರ ಅಪಹರಣಕ್ಕೆ ಯತ್ನ ಆರೋಪ: ಬಿಜೆಪಿ ನಾಯಕ ಸಹಿತ ಏಳು ಮಂದಿಯ ಬಂಧನ
ಎರಡು ರಿವಾಲ್ವರ್ ವಶ

ಮಲಪ್ಪುರಂ,ಜು.25: ಪ್ರಮುಖ ಉದ್ಯಮಿ,ಶಿಫಾ ಅಲ್‍ಜಝೀರ ಮೆಡಿಕಲ್ ಗ್ರೂಪ್ ಚೇರ್‍ಮೆನ್ ಡಾ. ಕೆ.ಟಿ. ರಬೀವುಲ್ಲಾರ ಮನೆಗೆ ಬಲವಂತದಿಂದ ನುಗ್ಗಲು ಯತ್ನಿಸಿದ ಬಿಜೆಪಿ ನಾಯಕ ಸಹಿತ ಏಳು ಮಂದಿಯನ್ನು ಮಲಪ್ಪುರಂ ಪೊಲೀಸರು ಬಂಧಿಸಿದ್ದಾರೆ. ಇವರು ಆಗಮಿಸಿದ ಮೂರು ವಾಹನಗಳು ಮತ್ತು ಅವರ ಬಳಿಯಿದ್ದ ಎರಡು ರಿವಾಲ್ವರ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಮಂಗಳೂರು ನಿವಾಸಿ ಅಸ್ಲಂ ಗುರುಕ್ಕಲ್, ಈತನ ಗನ್‍ಮೆನ್ ಕರ್ನಾಟಕದ ಪೊಲೀಸ್ ಸಿಬ್ಬಂದಿ ಕೇಶವ ಮೂರ್ತಿ, ಮಂಗಳೂರಿನ ರಮೇಶ್, ಸುನೀಲ್‍ಕುಮಾರ್, ಕಾಸರಗೋಡಿನ ರಿಯಾಝ್, ಅರ್ಷದ್, ಉಸ್ಮಾನ್‍ರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಗೆ ನುಗ್ಗಿ ಅಪಹರಣ ನಡೆಸಲು ಆರೋಪಿಗಳು ಯತ್ನಿಸಿದ್ದಾರೆಂದು ಡಾ.ರಬೀವುಲ್ಲಾ ಮತ್ತು ಪತ್ನಿ ದೂರು ನೀಡಿದ್ದಾರೆ. ಉದ್ಯಮದ ದ್ವೇಷ ಘಟನೆಗೆ ಕಾರಣವಾಗಿದೆ. ಡಾ.ರಬೀವುಲ್ಲಾರನ್ನು ಅಪಹರಣ ನಡೆಸಿ ಮಾತುಕತೆ ನಡೆಸುವುದು ಆರೋಪಿಗಳ ಉದ್ದೇಶವಾಗಿತ್ತೆಂದು ಪೊಲೀಸರು ಶಂಕಿಸಿದ್ದಾರೆ. ಇವರು ಪ್ರಯಾಣಿಸಿದ ವಾಹನಗಳಲ್ಲಿ ಒಂದಕ್ಕೆ ‘ಕರ್ನಾಟಕ ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್’ ಎಂಬ ಸ್ಟಿಕ್ಕರ್ ಅಂಟಿಸಲಾಗಿತ್ತು. ಘಟನೆ ನಡೆದ ಕೂಡಲೇ ಆರೋಪಿಗಳಲ್ಲಿ ಮೂವರನ್ನು ಕಸ್ಟಡಿಗೆ ಪಡೆಯಲಾಗಿದ್ದರೂ ಮೂವರು ಎರಡು ವಾಹನಗಳಲ್ಲಿ ಪರಾರಿಯಾಗಿದ್ದರು. ಇವರನ್ನು ಕಲ್ಲಿಕೋಟೆ, ಕಣ್ಣೂರ್‍ಗಳಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಸೋಮವಾರ ಬೆಳಗ್ಗೆ ಮಲಪ್ಪುರಂ ಕೊಡೂರಿನ ರಬೀವುಲ್ಲಾರ ಮನೆಗೆ ಮೂರು ವಾಹನಗಳು ಬಂದಿದ್ದವು. ಆರೋಪಿಗಳು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಕರ್ನಾಟಕ ರಿಜಿಸ್ಟ್ರೇಶನ್‍ನ ಮೂರುವಾಹನಗಳಲ್ಲಿ ಬಂದವರು ರಬೀವುಲ್ಲಾರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಆದರೆ, ಅವರಿಗೆ ಕಾವಲುಗಾರ ಅನುಮತಿ ಕೊಡಲಿಲ್ಲ. ಇಬ್ಬರು ಮನೆಯ ಕಾಂಪೌಂಡ್‍ಗೋಡೆ ಹಾರಿ ಒಳಗೆ ಪ್ರವೇಶಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ಗುಂಪುಗೂಡಿದ ಊರಿನವರು ಇವರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಅಸ್ಲಂ ಗುರುಕ್ಕಲ್ ನೇತೃತ್ವದಲ್ಲಿ ದುಷ್ಕರ್ಮಿಗಳ ತಂಡ ಬಂದಿತ್ತು ಎಂದು ಪೊಲೀಸರು ಬಹಿರಂಗಪಡಿಸಿದರು. ವಶಕ್ಕೆ ಪಡೆದ ಬಂದೂಕುಗಳಲ್ಲಿ ಒಂದು ಅಸ್ಲಂ ಗುರುಕ್ಕಲ್‍ರ ಗನ್‍ಮ್ಯಾನ್‍ನದ್ದಾಗಿದೆ.
‘ರಬೀವುಲ್ಲಾ ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಸಂಬಂಧಿಕರಿದ್ದಾರೆಂದು’ ಕೆಲವು ಆನ್‍ಲೈನ್ ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಆದರೆ, ತಾನು ಚಿಕಿತ್ಸೆಪಡೆಯುತ್ತಿದ್ದೇನೆ. ವೈದ್ಯರ ಸೂಚನೆ ಪ್ರಕಾರ ಫೋನ್ ಬಳಸುವುದನ್ನು ಕಡಿಮೆ ಮಾಡಿದ್ದೇನೆ, ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದೇನೆ ಎಂದು ಅವರು ಫೇಸ್‍ಬುಕ್‍ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದರು. ಜಿಲ್ಲಾ ಪೊಲೀಸ್ ಅಧಿಕಾರಿ ದೆಬೇಶ್ ಕುಮಾರ್ ನೇತೃತ್ವದಲ್ಲಿ ಮಲಪ್ಪುರಂ ಡಿವೈಎಸಿ ಜಲೀಲ್ ತೋಟ್ಟತ್ತಿಲ್, ಸಿಐಎ ಪ್ರೇಂಜಿತ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.







