ಈ ದೇವಸ್ಥಾನದ ನೆಲದಲ್ಲಿ ಕೇವಲ ಒಂದು ರಾತ್ರಿ ಮಲಗಿದರೆ ಬಂಜೆಯರಿಗೂ ಮಕ್ಕಳಾಗುತ್ತವಂತೆ....!

ಜನರು ಹಲವಾರು ಮೂಢನಂಬಿಕೆಗಳಲ್ಲಿ ಶ್ರದ್ಧೆ ಹೊಂದಿದ್ದಾರೆ. ಆದರೆ ಅದು ಸರಿಯೇ ಎಂಬ ಬಗ್ಗೆ ಯಾರೂ ಆಳವಾಗಿ ಯೋಚಿಸುವುದಿಲ್ಲ.
ಮಹಿಳೆಯರು ಕಾರಣಾಂತರಗಳಿಂದ ಮಕ್ಕಳಾಗದಿದ್ದಾಗ ಇಂತಹ ಮೂಢನಂಬಿಕೆಗಳ ಮೊರೆ ಹೋಗುವುದು ಹೆಚ್ಚು. ಕೆಲವೊಮ್ಮೆ ಸಂತಾನಪ್ರಾಪ್ತಿಗಾಗಿ ವಿಲಕ್ಷಣ ವಿಧಾನಗಳನ್ನೂ ಅವರು ಅನುಸರಿಸುವಂತೆ ಮಾಡಲಾಗುತ್ತದೆ. ಇಲ್ಲೊಂದು ದೇವಸ್ಥಾನವಿದೆ. ಈ ದೇವಸ್ಥಾನದ ನೆಲದಲ್ಲಿ ಒಂದೇ ರಾತ್ರಿ ಮಲಗಿದರೆ ಮಹಿಳೆಯರು ಗರ್ಭವತಿಯರಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಎಲ್ಲಿದೆ ಈ ದೇವಸ್ಥಾನ?

ಈ ವಿಶೇಷ ದೇವಸ್ಥಾನವು ಇರುವುದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಾಡ್ ಭರೋಲ್ ಸಮೀಪದ ಸಿಮಾಸ್ ಗ್ರಾಮದಲ್ಲಿ. ಇದು ಸಿಮಸಾ ಮಾತಾ ಮಂದಿರವಾಗಿದ್ದು, ದೇವಿಯನ್ನು ‘ಸಂತಾನ ದಾತ್ರಿ ’ಎಂದೂ ಕರೆಯಲಾಗುತ್ತದೆ.
ಸಾಕಷ್ಟು ಪ್ರಸಿದ್ಧ ದೇವಸ್ಥಾನ

ಹಿಮಾಚಲ ಪ್ರದೇಶ ಮತ್ತು ಸಮೀಪದ ರಾಜ್ಯಗಳಲ್ಲಿ ಈ ದೇವಸ್ಥಾನವು ತುಂಬ ಜನಪ್ರಿಯವಾಗಿದೆ. ಮಗುವನ್ನು ಪಡೆಯುವ ಕನಸು ಹೊತ್ತು ಸಮೀಪದ ಪಂಜಾಬ್ ಮತ್ತು ಹರ್ಯಾಣಗಳಿಂದ ಸಾವಿರಾರು ಮಹಿಳೆಯರು ನವರಾತ್ರಿ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ನವರಾತ್ರಿಯಲ್ಲಿ ಜನವೋ ಜನ

ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಮಗುವಿನ ಆಸೆಯೊಂದಿಗೆ ಭಾರೀ ಸಂಖ್ಯೆಯಲ್ಲಿ ದಂಪತಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ. ನವರಾತ್ರಿ ಉತ್ಸವವನ್ನು ಸ್ಥಳೀಯ ಭಾಷೆಯಲ್ಲಿ ‘ಸಲಿಂದ್ರ(ಕನಸು)’ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ಇಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮಕ್ಕಳಿಲ್ಲದ ಮಹಿಳೆಯರು ದೇವಸ್ಥಾನದ ನೆಲದಲ್ಲಿ ಹಗಲು ಮತ್ತು ರಾತ್ರಿ ಮಲಗುತ್ತಾರೆ.
ಕನಸಿನಲ್ಲಿ ಸಿಮಸಾ ಮಾತಾ

ದೇವಿಯ ಮೇಲೆ ಪೂರ್ಣ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಆಗಮಿಸುವ ಮಹಿಳೆ ಯರು ಮಲಗಿದಾಗ ಅವರ ಕನಸಿನಲ್ಲಿ ಮಾನವ ರೂಪದ ದೇವಿಯು ಕಾಣಿಸಿಕೊಂಡು ಸಂತಾನ ಪ್ರಾಪ್ತಿಯಾಗುವಂತೆ ಆಶೀರ್ವದಿಸುತ್ತಾಳೆ ಎಂದು ಹೇಳಲಾಗಿದೆ. ಯಾವುದೇ ಮಹಿಳೆಗೆ ಹೂವು ಅಥವಾ ಹಣ್ಣು ಸ್ವೀಕರಿಸಿದ ಕನಸು ಬಿದ್ದರೆ ಆಕೆಗೆ ಮಕ್ಕಳಾಗುವಂತೆ ಆಶೀರ್ವಾದ ದೊರಕಿದೆ ಎಂದು ಅರ್ಥ.
ನಂಬಿಕೆಯೇ ಮುಖ್ಯ
ಇಲ್ಲಿ ನಂಬಿಕೆಯೇ ಮುಖ್ಯವಾಗಿದ್ದು, ದೇವಿಯು ಹುಟ್ಟಲಿರುವ ಮಗುವಿನ ಲಿಂಗವನ್ನೂ ತಿಳಿಸುತ್ತಾಳೆ ಎನ್ನಲಾಗಿದೆ. ಮಹಿಳೆ ಕನಸಿನಲ್ಲಿ ಪೇರಲ ಹಣ್ಣು ಸ್ವೀಕರಿಸಿದರೆ ಗಂಡು ಮಗುವಾಗುತ್ತದೆ ಮತ್ತು ಬೆಂಡೆಕಾಯಿ ಪಡೆದರೆ ಹೆಣ್ಣುಮಗುವಾಗುತ್ತದೆ ಎನ್ನುವುದು ಇಲ್ಲಿಯ ನಂಬಿಕೆ.
ಸಂತಾನ ಭಾಗ್ಯವಿಲ್ಲ ಎಂಬ ಸೂಚನೆಗಳೂ ಇವೆ
ಮಹಿಳೆಯು ಕನಸಿನಲ್ಲಿ ಕಲ್ಲು, ಕಟ್ಟಿಗೆ ಅಥವಾ ಲೋಹಗಳಂತಹ ಇತರ ವಸ್ತುಗಳನ್ನು ಕಂಡರೆ ಅದು ಆಕೆಗೆ ಎಂದೂ ಮಕ್ಕಳಾಗುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಸಂತಾನಭಾಗ್ಯವಿಲ್ಲವೆಂದು ಸೂಚಿಸಿದ ಕನಸು ಬಿದ್ದ ಬಳಿಕವೂ ಮಹಿಳೆ ದೇವಸ್ಥಾನದ ಆವರಣದಿಂದ ನಿರ್ಗಮಿಸದಿದ್ದರೆ ಆಕೆಯ ಮೈಮೇಲೆ ತುರಿಕೆಯನ್ನುಂಟು ಮಾಡುವ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಆ ಘಳಿಗೆಯಲ್ಲೇ ಆಕೆ ಕಡ್ಡಾಯವಾಗಿ ದೇವಸ್ಥಾನದಿಂದ ತೆರಳಬೇಕು ಎಂದು ನಂಬಲಾಗಿದೆ.
ಹೆಚ್ಚುವರಿ ಬೋನಸ್ ಕೂಡ ಇದೆ

ಸಿಮಸಾ ಮಾತಾ ಮಂದಿರದ ಬಳಿ ಬೃಹತ್ ಕಲ್ಲೊಂದಿದ್ದು ಇದೂ ಜನಪ್ರಿಯವಾಗಿದೆ. ಈ ಕಲ್ಲಿನ ವೈಶಿಷ್ಟವೆಂದರೆ ನೀವು ಎರಡೂ ಕೈಗಳಿಂದ ಇದನ್ನು ಸರಿಸಲು ಪ್ರಯತ್ನಿಸಿದರೆ ಜಪ್ಪಯ್ಯಾ ಎಂದರೂ ಸಾಧ್ಯವಾಗುವುದಿಲ್ಲ. ಆದರೆ ಕಿರುಬೆರಳಿನಿಂದ ಸರಿಸಿದರೆ ಕಲ್ಲು ಚಲಿಸುತ್ತದೆ ಎಂದು ಹೇಳಲಾಗಿದೆ.







