ಗುಡಿಸಲು ನಿರ್ಮಿಸಿದ ಕುಟುಂಬಗಳಿಂದ ನಿವೇಶನಕ್ಕಾಗಿ ಆಗ್ರಹ
ಚಿನ್ನಿಗ ಗ್ರಾಪಂ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿ ವಾಸಿಸುತ್ತಿರುವ 20 ಕುಟುಂಬಗಳು

ಜನ್ನಾಪುರ, ಜು.25: ವಸತಿ ರಹಿತರಿಗೆ ಸರ್ಕಾರದ ವಸತಿ ಯೋಜನೆಯಲ್ಲಿ ವಸತಿ ಭಾಗ್ಯ ಒದಗಿಸಬೇಕು ಎಂದು ಒತ್ತಾಯಿಸಿ ನಿವೇಶನ ರಹಿತರು ಮೂಡಿಗೆರೆ ತಾಲೂಕಿನ ಚಿನ್ನಿಗ-ಜನ್ನಾಪುರ ಗ್ರಾಪಂ ಕಚೇರಿಗೆ ತೆರಳಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದರು.
ನಿವೇಶನ ಒದಗಿಸಲು ಗ್ರಾಪಂ ಗೆ ಕಳೆದ 4 ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ನಿವೇಶನ ಒದಗಿಸಿಲ್ಲ ಎಂದು ಆರೋಪಿಸಿ ಚಿನ್ನಿಗ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತ ಸುಮಾರು 20 ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ವಾಸಿಸಲು ಪ್ರಾರಂಭಿಸಿದ್ದಾರೆ. ಕಳೆದ 4 ದಿನಗಳಿಂದಲೂ ಗುಡಿಸಲು ನಿರ್ಮಿಸಿ, ವಾಸಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಆಡಳಿತವಾಗಲೀ, ತಾಲೂಕಿನ ಉನ್ನತ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಸ್ಥಳಕ್ಕೆ ಬಂದು ನಿವೇಶನ ಸಮಸ್ಯೆಯನ್ನು ಬಗೆಹರಿಸಿಲ್ಲ. ತಾವು ಗುಡಿಸಲು ನಿರ್ಮಿಸಿ ವಾಸಿಸುತ್ತಿರುವ ಜಾಗವನ್ನು ತಮಗೆ ಅಧಿಕೃತವಾಗಿ ನಿವೇಶನವನ್ನಾಗಿ ನೀಡಬೇಕು ಎಂದು ವಸತಿ ರಹಿತರು ಒತ್ತಾಯಿಸಿದರು.
ನಿವೇಶನ ರಹಿತರು ತಾವು ಕಳೆದ 4 ವರ್ಷಗಳಿಂದಲೂ ಚಿನ್ನಿಗ ಗ್ರಾಮ ಪಂಚಾಯಿತಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಅಣಜೂರಿನ ಹಾಜಬ್ಬ ಎಂಬುವವರಿಗೆ 1992ರಲ್ಲಿ ತಹಸೀಲ್ದಾರರು ಹಕ್ಕುಪತ್ರ ನೀಡಿದ್ದಾರೆ. 25 ವರ್ಷಗಳೇ ಕಳೆದರೂ ಆ ಹಕ್ಕುಪತ್ರಕ್ಕೆ ನಿವೇಶನ ಒದಗಿಸಿಲ್ಲ. ಚಿನ್ನಿಗ ಗ್ರಾಮದ ಸ.ನಂ.204ರಲ್ಲಿ ಈಗಾಗಲೇ ನಿವೇಶನಕ್ಕೆಂದು 2 ಎಕರೆ ಹಾಗೂ ಅಣಜೂರಿನ ಮಸೀದಿ ಹಿಂಭಾಗದಲ್ಲಿ ಡೀಮ್ಡ್ ಫಾರೆಸ್ಟ್‍ಗೆ ಸೇರಿದ 4 ಎಕರೆ ಜಾಗ ಮೀಸಲಿರಿಸಲಾಗಿದೆ.
ಅವುಗಳ ಪೈಕಿ 38 ಜನ ನಿವೇಶನರಹಿತರಿಗೆ ಗ್ರಾಪಂ ಮೂಲಕ ಹಕ್ಕುಪತ್ರವನ್ನು ಈಗಾಗಲೇ ವಿತರಿಸಲಾಗಿದೆ. ಆದರೂ ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ದೂರಿದರು. ಗ್ರಾಪಂ ಪಿಡಿಒ ಅವರನ್ನು ವಿಚಾರಿಸಿದರೆ, ನಮ್ಮ ಅಹವಾಲುಗಳಿಗೆ ಕಿವಿಗೊಡುವುದಿಲ್ಲ. ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸುತ್ತಾರೆ. ಹಾಗಾದರೆ ನಮ್ಮ ಅಹವಾಲುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಈಗಾಗಲೇ ಚಿನ್ನಿಗ ಗ್ರಾಮದ ಸ.ನಂ.16 ಹಾಗೂ ಸ.ನಂ.204ರಲ್ಲಿ ಸುಮಾರು 20 ಗುಡಿಸಲುಗಳನ್ನು ನಿರ್ಮಿಸಿ ವಾಸಿಸಲು ಪ್ರಾರಂಭಿಸಿದ್ದೇವೆ. ಅಲ್ಲಿಂದ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯಿಂದ ಬಲಪ್ರಯೋಗಿಸದೆ ನಮ್ಮ ಅಹವಾಲುಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ನಮ್ಮ ಗುಡಿಸಲುಗಳನ್ನು ತೆರವುಗೊಳಿಸಲು ಬಂದರೆ ನಾವು ಜಗ್ಗುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೆ ನಾವು ವಿರಮಿಸುವುದಿಲ್ಲ. ನಾವು ಚಿನ್ನಿಗ ಗ್ರಾಪಂ ವ್ಯಾಪ್ತಿಯಲ್ಲೇ ಪಡಿತರ ಚೀಟಿ, ಆಧಾರ್ ಗುರುತಿನ ಚೀಟಿ ಹಾಗೂ ಮತದಾನದ ಹಕ್ಕುಗಳನ್ನು ಪಡೆದಿರುತ್ತೇವೆ. ಇದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ಈಗ ನಮಗೆ ವಾಸಿಸಲು ಮನೆಯಿಲ್ಲದ ಕಾರಣ ಗುಡಿಸಲುಗಳನ್ನು ನಿರ್ಮಿಸಿ ವಾಸಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಮಾಜಿ ಉಪಾಧ್ಯಕ್ಷ ಸಿ.ವಿ.ಸುದೀಪ್, ಮುಖಂಡರಾದ ಎಚ್.ಆರ್.ಪುಟ್ಟಸ್ವಾಮಿ, ಜಯರಾಮ್ ನಿಡಗೋಡು, ವಿಶ್ವಾಮಿತ್ರ, ಗಜೇಂದ್ರ, ಇಬ್ರಾಹಿಂ ಖಲೀಲ್, ವೀಣಾ ನಿಡಗೋಡು, ನಿವೇಶನರಹಿತ ಗುಡಿಸಲು ನಿವಾಸಿಗಳಾದ ಹಾಜಬ್ಬ, ಅಜೀಜ್, ಕುಸುಮ, ಅಹಮ್ಮದ್, ಫೈರೋಝ್, ತಾಜ್‍ಪೀರ್ ಸಹಿತ ಸುಮಾರು 20 ಗುಡಿಸಲು ನಿವಾಸಿಗಳು ಇದ್ದರು.
‘ನಿವೇಶನಕ್ಕಾಗಿ ಸುಮಾರು 80 ಫಲಾನುಭವಿಗಳು ಈಗಾಗಲೇ ಗ್ರಾಪಂ.ಗೆ ಅರ್ಜಿ ಸಲ್ಲಿಸಿದ್ದಾರೆ. ನಾವು 38 ಹಕ್ಕುಪತ್ರಗಳನ್ನು ವಿತರಿಸಿದ್ದೇವೆ. ಚಿನ್ನಿಗ ಗ್ರಾಮದ ಸ.ನಂ.204ರಲ್ಲಿ ಅವರಿಗೆ ನಿವೇಶನ ನೀಡಲಾಗುವುದು. ಉಳಿದವರಿಗೆ ಅಣಜೂರು ಮಸೀದಿ ಹಿಂಭಾಗದಲ್ಲಿ 4 ಎಕರೆ ಜಾಗ ಮಂಜೂರಾಗಿದೆ. ಅದು ಡೀಮ್ಡ್ ಫಾರೆಸ್ಟ್ ಜಾಗವಾಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ಅದರ ಸಮಸ್ಯೆಗಳನ್ನು ಮುಗಿಸಿ ಗ್ರಾಪಂ.ಗೆ ಹಸ್ತಾಂತರಿಸಿದ ನಂತರ ನಿವೇಶನರಹಿತ ಫಲಾನುಭವಿಗಳಿಗೆ ವಿತರಿಸಲಾಗುವುದು’
- ಪುನರ್ವ, ಪಿಡಿಒ, ಚಿನ್ನಿಗ ಗ್ರಾಪಂ.







