ಜು.27ರಂದು ಜಿಲ್ಲಾ ಮಟ್ಟದ ಮಾಧ್ಯಮ ಕಾರ್ಯಾಗಾರ
ಬೆಂಗಳೂರು, ಜು.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ (ಪಿಐಬಿ) ವತಿಯಿಂದ ಜು.27ರಂದು ರಾಮನಗರದಲ್ಲಿ ಪತ್ರಕರ್ತರಿಗಾಗಿ ಜಿಲ್ಲಾ ಮಟ್ಟದ ಮಾಧ್ಯಮ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಕಚೇರಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಾಗಾರವನ್ನು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಡಾ.ಮಮತಾ ಬಿ.ಆರ್. ಉದ್ಘಾಟಿಸಲಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಟಿ.ಸಿ.ಸರಳ ಕುಮಾರಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಚ್.ಪ್ರಕಾಶ್ ಉಪಸ್ಥಿತರಿರುತ್ತಾರೆ.
ಮಾಧ್ಯಮ ಕಾರ್ಯಾಗಾರದಲ್ಲಿ ಹಿರಿಯ ಮಾಧ್ಯಮ ತಜ್ಞ ಮತ್ತು ಭಾರತೀಯ ವಾರ್ತಾ ಸೇವೆಯ ನಿವೃತ್ತ ಹಿರಿಯ ಅಧಿಕಾರಿ ಖಾದ್ರಿ ಎಸ್.ಅಚ್ಯುತನ್, ಜಿಎಸ್‌ಟಿ ಸಹಾಯಕ ಆಯುಕ್ತ ಸುನಿಲ್ ಹಾಗೂ ಡಾ.ಹರ್ಷ ಆರ್. ಮತ್ತು ಸಿಂಡಿಕೇಟ್ ಬ್ಯಾಂಕ್(ಎಸ್‌ಎಲ್‌ಬಿಸಿ) ಮುಖ್ಯ ವ್ಯವಸ್ಥಾಪಕ ವೈ.ಎ.ವಜಂತ್ರಿ ಸಂಪನ್ಮೂಲ ವ್ಯಕ್ತಿ ಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಧ್ಯಮ ರಂಗದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಪಿಐಬಿ ಹಾಗೂ ಆರ್‌ಎನ್‌ಐ ಕಾರ್ಯಚಟುವಟಿಕೆಗಳು, ಸರಕುಗಳು ಹಾಗೂ ಸೇವಾ ತೆರಿಗೆ ಮತ್ತು ಬ್ಯಾಂಕುಗಳ ಮೂಲಕ ಜಾರಿಗೊಳ್ಳುತ್ತಿರುವ ವಿವಿಧ ಯೋಜನೆಗಳು-ಸಹಾಯ ಸೌಲಭ್ಯ ಮುಂತಾದ ವಿಷಯಗಳ ಕುರಿತು ಕಾರ್ಯಾಗಾರ ಬೆಳಕುಚೆಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.







