ಆಟೊ ರವಿ ಕೊಲೆ: ಸ್ನೇಹಿತನ ಬಂಧನ

ಬೆಂಗಳೂರು, ಜು.25: ಆಟೊ ರವಿ ಕೊಲೆ ಪ್ರಕರಣ ಸಂಬಂಧ ಆತನ ಸ್ನೇಹಿತನನ್ನು ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ನಾಗೇಂದ್ರ(26) ಬಂಧಿತ ಕೊಲೆ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಗೇಂದ್ರ ಮತ್ತು ಕುಣಿಗಲ್ ತಾಲೂಕು ಅಂಚೆಪಾಳ್ಯದ ರವಿಕುಮಾರ್ ಆಟೊ ಚಾಲಕರಾಗಿದ್ದು, ಇವರಿಬ್ಬರೂ ಸ್ನೇಹಿತರು. ನಾಲ್ಕು ವರ್ಷದ ಹಿಂದೆ ರವಿಕುಮಾರ್ ತನ್ನ ಸ್ನೇಹಿತ ನಾಗೇಂದ್ರನಿಗೆ 4.5 ಲಕ್ಷ ರೂ. ಸಾಲ ನೀಡಿದ್ದನು. ಈ ಹಣ ಹಿಂದಿರುಗಿಸುವಂತೆ ಹಲವಾರು ಬಾರಿ ರವಿ ಕೇಳುತ್ತಿದ್ದರೂ ಕೊಡದೆ ನಾಗೇಂದ್ರ ಸತಾಯಿಸುತ್ತಿದ್ದನು. ಸಾಲದ ವಿಚಾರವಾಗಿ ಅನೇಕ ಸಲ ಇವರಿಬ್ಬರ ನಡುವೆ ಜಗಳವೂ ನಡೆದಿತ್ತು ಎನ್ನಲಾಗಿದೆ.
ರವಿವಾರ ರಾತ್ರಿ ಸಾಲದ ಹಣದ ವಿಚಾರವಾಗಿ ಮಾತನಾಡಬೇಕೆಂದು ನಾಗೇಂದ್ರ ನಗರದ ಮಾಳಗಾಲದಲ್ಲಿರುವ ತನ್ನ ಸ್ನೇಹಿತ ಶಿವರಾಜ್ ಎಂಬಾತನ ಮನೆಗೆ ರವಿಕುಮಾರ್‌ನನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮೂವರೂ ಮದ್ಯ ಸೇವಿಸಿದ್ದು, ಮದ್ಯದ ಅಮಲಿನಲ್ಲಿ ರವಿಕುಮಾರ್ ಸಾಲ ಹಿಂದಿರುಗಿಸುವಂತೆ ನಾಗೇಂದ್ರನಿಗೆ ಕೇಳಿದ್ದಾನೆ. ಈ ವಿಚಾರವಾಗಿ ಸಣ್ಣದಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದಾಗ ನಾಗೇಂದ್ರ ಕೈಗೆ ಸಿಕ್ಕ ಕ್ರಿಕೆಟ್ ಬ್ಯಾಟ್‌ನಿಂದ ರವಿಕುಮಾರ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಣದ ವಿಚಾರವಾಗಿ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡು ಮಂಗಳವಾರ ಬೆಳಗ್ಗೆ 6 ಗಂಟೆಯಲ್ಲಿ ಆರೋಪಿ ನಾಗೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







