ಪತ್ತೆಗೆ ನೂತನ ಯಂತ್ರ ಅಳವಡಿಕೆ
ಬೆಂಗಳೂರು, ಜು.25: ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಲು ನಗರದ ಬಿಎಂಎಸ್ ಆಸ್ಪತ್ರೆ ಥರ್ಮಲ್ ಮ್ಯಾಮೋಗ್ರಫಿ ಎಂಬ ನೂತನ ಯಂತ್ರ ಅಳವಡಿಸಿದ್ದು, ಇದರಿಂದ ಆ ಕಾಯಿಲೆಯನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಲು ಸುಲಭವಾಗುತ್ತದೆ ಎಂದು ನಿರಾಮಯ್ ಹೆಲ್ತ್ ಆನಾಲಿಟಿಕ್ಸ್‌ನ ಸಿಇಓ ಹಿರಿಯ ವೈದ್ಯರಾದ ಡಾ.ಗೀತಾ ಮಂಜುನಾಥ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ನಿಂದ ಮೃತಪಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಆ ಕಾಯಿಲೆ ಹಂತ ಮೀರಿ, ಗಂಭೀರ ಸ್ಥಿತಿಗೆ ತಲುಪಿದಾಗ ಪತ್ತೆಯಾಗುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ ಈ ಕ್ಯಾನ್ಸರ್‌ಅನ್ನು ಮೊದಲ ಹಂತದಲ್ಲಿಯೇ ಪತ್ತೆ ಮಾಡಲು ಈ ಯಂತ್ರ ನೆರವಾಗಲಿದೆ ಹಾಗೂ ಇದರಿಂದ ಮೃತರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
3 ಅಡಿ ಅಂತರ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ಬಹುತೇಕ ಆಸ್ಪತ್ರೆಗಳಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಕೆಲವು ಆಸ್ಪತ್ರೆಗಳು ಮಾತ್ರ ಮ್ಯಾಮೋಗ್ರಫಿ ಬಳಸುತ್ತಿದ್ದಾರೆ. ಆದರೆ, ಇದು ಅವೆಲ್ಲಕ್ಕಿಂತ ವಿಭಿನ್ನವಾಗಿದ್ದು, ದೇಹ ಹಾಗೂ ಥರ್ಮಲ್ ಸೆನ್ಸಿಂಗ್ ಡಿವೈಸ್ ನಡುವೆ 3 ಅಡಿ ಅಂತರ ಕಾಪಾಡಿಕೊಳ್ಳಲಾಗುತ್ತದೆ. ಅವುಗಳ ನಡುವೆ ಒಂದು ತೆಳುವಾದ ಬಿಳಿ ಬಟ್ಟೆಯನ್ನು ಹಾಕಲಾಗಿರುತ್ತದೆ. ಹಾಗಾಗಿ ಇದು ಎಲ್ಲಾ ರೀತಿಯಲ್ಲೂ ಆಕೆಗೆ ಸುರಕ್ಷಿತವಾಗಿರುತ್ತದೆ ಎಂದು ವಿವರಿಸಿದರು.







