ಸೇನಾ ಪಡೆಗಳಿಗೆ ಸಾಕಷ್ಟು ಶಸ್ತ್ರಾಸ್ತ್ರ ಒದಗಿಸಲಾಗಿದೆ: ಜೇಟ್ಲಿ

ಹೊಸದಿಲ್ಲಿ, ಜು.25: ಭಾರತೀಯ ಸೇನಾಪಡೆಗಳು ದೇಶದ ಸಾರ್ವಭೌಮತೆಯನ್ನು ಸಮರ್ಥವಾಗಿ ಮತ್ತು ದಕ್ಷತೆಯಿಂದ ರಕ್ಷಿಸಿಕೊಳ್ಳಲು ಸನ್ನದ್ದವಾಗಿವೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಒಂದು ವೇಳೆ ಯುದ್ದ ನಡೆದರೆ ಭಾರತದ ಸೇನಾಪಡೆಯ ಶಸ್ತ್ರಾಸ್ತ್ರಗಳು ಕೇವಲ ಹತ್ತು ದಿನಗಳಲ್ಲಿ ಬರಿದಾಗಲಿದೆ ಎಂಬ ಸಿಎಜಿ ವರದಿಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಸೇನೆಗೆ ಲಭ್ಯವಿರುವ 152 ವಿಧದ ಯುದ್ಧಸಾಮಾಗ್ರಿಗಳಲ್ಲಿ 61 ಯುದ್ದಸಾಮಾಗ್ರಿಗಳು 10 ದಿನದ ಯುದ್ದಕ್ಕೆ ಸಾಕಾಗಬಹುದು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಸೇನೆಯಲ್ಲಿ ಶೇ.40ರಷ್ಟು ಯುದ್ದಸಾಮಾಗ್ರಿಗಳ ಕೊರತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಉಗ್ರ ಕದನದ ಸಂದರ್ಭ ಸೇನಾಪಡೆ 40 ದಿನಗಳ ಅವಧಿಗೆ ಸಾಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಹೊಂದಿರಬೇಕು ಎಂದು ನಿರೀಕ್ಷಿಸಲಾಗುತ್ತಿದೆ ಎಂದರು. ಆದರೆ ಈ ಹೇಳಿಕೆಯಿಂದ ತೃಪ್ತರಾಗದ ವಿಪಕ್ಷಗಳು ಸರಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡವು. ಈ ಪ್ರಕ್ರಿಯೆ ಯಾವಾಗ ಸರಳವಾದೀತು ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ಪ್ರಶ್ನಿಸಿದರು. ಈ ನಿಟ್ಟಿನಲ್ಲಿ ಮೂರು ವರ್ಷ ಏನನ್ನೂ ಮಾಡಲಾಗಿಲ್ಲ. ಕೆಲ ದಿನದ ಹಿಂದೆಯಷ್ಟೇ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ದೇಕ್ಕೆ ಪೂರ್ಣಪ್ರಮಾಣದ ರಕ್ಷಣಾ ಸಚಿವರು ಇಲ್ಲದಿರುವುದು ಇದಕ್ಕೆಲ್ಲಾ ಕಾರಣ. ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ನಿಷ್ಕ್ರಿಯರಾಗಿದ್ದರು ಎಂದರು.
ಈ ವಿಷಯದ ಬಗ್ಗೆ ವಿಪಕ್ಷಗಳು ಚರ್ಚೆಗೆ ಬಯಸುವುದಾದರೆ ಪ್ರತ್ಯೇಕ ನೋಟಿಸ್ ನೀಡಬೇಕು ಎಂದು ಸದನದ ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದರು. ಇದಕ್ಕೂ ಮೊದಲು ವಿಷಯ ಪ್ರಸ್ತಾವಿಸಿದ್ದ ಸಮಾಜವಾದಿ ಪಕ್ಷದ ರಾಮ್‌ಗೋಪಾಲ್ ಯಾದವ್, ಗಡಿಯಲ್ಲಿ ಪಾಕ್ ಮತ್ತು ಚೀನಾದ ಜೊತೆಗಿನ ಬಿಕ್ಕಟ್ಟು ಮುಂದುವರಿದಿರುವಂತೆಯೇ ಭಾರತ ಸೇನೆಗೆ ಶಸ್ತ್ರಾಸ್ತ್ರದ ಕೊರತೆಯಿದೆ ಎಂಬ ಸಿಎಜಿ ವರದಿ ಬಂದಿದೆ. ಇದರಿಂದ ಜನತೆ ಆತಂಕಗೊಂಡಿದ್ದಾರೆ. ದಯವಿಟ್ಟು ದೇಶವನ್ನು ರಕ್ಷಿಸಲು ಅಗತ್ಯವಿರುವುದನ್ನು ಮಾಡಿ ಎಂದು ಹೇಳಿದರು.
ಶೂನ್ಯ ವೇಳೆಯಲ್ಲಿ ವಿಷಯವನ್ನು ಉಲ್ಲೇಖಿಸಿದ ಕಾಂಗ್ರೆಸ್‌ನ ರಿಪುನ್ ಬೋರ, ಈ ಹಿಂದಿನ ಯುಪಿಎ ಸರಕಾರ 2009 ಮತ್ತು 2013ರಲ್ಲಿ ಶಸ್ತ್ರಾಸ್ತ್ರ ಖರೀದಿಸಲು ಕೈಗೊಂಡಿದ್ದ ಪ್ರಮುಖ ನಿರ್ಧಾರಗಳಿಗೆ ಹಾಲಿ ಸರಕಾರ ಅನುಮೋದನೆ ನೀಡಿಲ್ಲ ಎಂದರು. ರಕ್ಷಣಾ ಸಚಿವಾಲಯ ಸಿದ್ದಪಡಿಸಿದ 16,500 ಕೋಟಿ ರೂ.ಮೊತ್ತದ ಯೋಜನೆಯನ್ನು ಇನ್ನೂ ಅನುಷ್ಠಾನಗೊಳಿಸಲಾಗಿಲ್ಲ ಎಂದ ಅವರು, ಭಾರತೀಯ ನೌಕಾಪಡೆಯ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಕಳೆದ ಕೆಲ ವರ್ಷಗಳಲ್ಲಿ 38 ಅಪಘಾತಗಳು ಸಂಭವಿಸಿವೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ . ಅಲ್ಲದೆ ಸುರಕ್ಷಾ ವ್ಯವಸ್ಥೆಗಳಿಗೆ ಅನುಮೋದನೆ ದೊರಕದ ಕಾರಣ ಇವು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಜೇಟ್ಲಿ, ಸಿಎಜಿ ವರದಿ 2013ರನ್ನು ಉಲ್ಲೇಖ ಅವಧಿಯನ್ನಾಗಿರಿಸಿಕೊಂಡಿದೆ ಎಂದು ಹೇಳಿದರು.







