ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬಳಸಿ: ಸಚಿವ ಕೃಷ್ಣಬೈರೇಗೌಡ ಸಲಹೆ

ಬೆಂಗಳೂರು, ಜು.25: ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯಗಳ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ. ರಾಜ್ಯ ಕೃಷಿ ಇಲಾಖೆ ಸಹಯೋಗದೊಂದಿಗೆ ಎಂಎಸ್ ರಾಮಯ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಆಹಾರ ತಜ್ಞರ ಮತ್ತು ಬಾಣಸಿಗರಿಗಾಗಿ ಸಿರಿಧಾನ್ಯಗಳ ಆಹಾರ ಕುರಿತ ಕಾರ್ಯಾಗಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಬಳಕೆಯನ್ನು ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ ಎಂದರು.
ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚಿನ ಮಳೆ ಹಾಗೂ ನೀರಿನ ಅಗತ್ಯವಿಲ್ಲ. ಅಕ್ಕಿ, ಗೋಧಿ ಬೆಳೆಗಳನ್ನು ಬೆಳೆಯುವುದರ ಬದಲಿಗೆ ರಾಗಿ, ಜೋಳ ಸೇರಿದಂತೆ ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯುವುದು ಲಾಭದಾಯಕ ಹಾಗೂ ಸುಲಭವಾದ ವಿಧಾನ. ಅಲ್ಲದೆ, ಸಿರಿಧಾನ್ಯಗಳನ್ನು ಬೆಳೆಯುವುದರಿಂದ ನಷ್ಟವಾಗುತ್ತದೆ ಎಂಬ ಭಯ ಇರುವುದಿಲ್ಲ. ಜೊತೆಗೆ, ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜಗತ್ತಿಗೂ ಆರೋಗ್ಯ ನೀಡಬಹುದಾಗಿದೆ ಎಂದು ಹೇಳಿದರು.
ಸಿರಿಧಾನ್ಯಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಆರೋಗ್ಯ ಕೆಡಿಸುವಂತಹ ಮಿಶ್ರಣಗಳನ್ನು ಬಳಸಿ ಮಾಡುವ ಪಿಜಾ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳ ರೀತಿಯಲ್ಲಿ ಸಿರಿಧಾನ್ಯಗಳಿಂದಲೂ ತಯಾರು ಮಾಡಬಹುದು. ಆದರೆ, ಈ ಪದಾರ್ಥಗಳ ಸಮರ್ಪಕ ಪ್ರಚಾರ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಕ್ಕರೆ ಖಾಯಿಲೆ(ಮಧುವೆುೀಹ)ಯಿಂದ ನರಳುತ್ತಿರುವ ರೋಗಿಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದ ಅವರು, ಶ್ರೀಮಂತರ ಮನೆಗಳಲ್ಲಿ ಇತ್ತೀಚಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆರ್‌ಯುಎಎಸ್‌ನ ಉಪ ಕುಲಪತಿ ಡಾ.ಎಸ್.ಆರ್. ಶಂಕರ್‌ಪಾಲ್, ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಉಪಸ್ಥಿತರಿದ್ದರು. ಇದೇ ವೇಳೆ ಸಿರಿಧಾನ್ಯಗಳಿಂದ ತಯಾರಿಸಿದ ಕೇಕ್, ಫಿಜ್ಜಾ, ಬಿಸ್ಕಟ್, ಕುಕ್ಕೀಸ್ ಸೇರಿ ಮುಂತಾದ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.







