ಪೇಜಾವರಶ್ರೀ ಮಧ್ಯಪ್ರವೇಶ ಅಗತ್ಯವಿಲ್ಲ: ಎಂ.ಬಿ.ಪಾಟೀಲ್ ಆಕ್ಷೇಪ

ಬೆಂಗಳೂರು, ಜು.25: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಕಪಿಮುಷ್ಠಿಯಲ್ಲಿರುವ ಪೇಜಾವರ ಶ್ರೀ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೌದ್ಧ, ಸಿಖ್ ಧರ್ಮಗಳಂತೆ ಬಸವ ಧರ್ಮವು ಜಾಗತಿಕ ಧರ್ಮವಾಗಬೇಕು. ಈ ವಿಚಾರದಲ್ಲಿ ಆರೆಸ್ಸೆಸ್ ಬೆಂಬಲಿತರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದರು.
ಪೇಜಾವರ ಶ್ರೀ ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಆದುದರಿಂದ ಈ ವಿಚಾರದಲ್ಲಿ ಅವರು ಮಧ್ಯಪ್ರವೇಶ ಮಾಡುವುದು ಬೇಡ. ಅದಕ್ಕೆ ಅವಕಾಶವನ್ನು ನೀಡಬಾರದು. ನಮಗೆ ನಮ್ಮ ಸಮುದಾಯದ ಮಠಾಧೀಶರು, ಮುಖಂಡರು, ಸ್ವಾಮೀಜಿಗಳು, ಚಿಂತಕರು, ಮೇಧಾವಿಗಳಿದ್ದಾರೆ. ಅವರ ನಡುವೆ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯಲಿ ಎಂದು ಎಂ.ಬಿ.ಪಾಟೀಲ್ ಹೇಳಿದರು.
ನಮಲ್ಲಿರುವ ಕೆಲ ಸ್ವಾಮೀಜಿಗಳು ಬಸವಣ್ಣನನ್ನು ನಂಬುವುದಿಲ್ಲ. ಅಂತಹವರು ಹಿಂದೂ ಧರ್ಮದಲ್ಲೆ ಮುಂದುವರೆಯಲಿ, ಇದಕ್ಕೆ ನಮ್ಮ ಯಾವುದೆ ಆಕ್ಷೇಪವಿಲ್ಲ. ನಮ್ಮ ಕೆಲವು ಮುಖಂಡರು ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಹೀಗಾಗಿ ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ಯಡಿಯೂರಪ್ಪ ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಬೇಕಿತ್ತು. ಆದರೆ, ಆರೆಸ್ಸೆಸ್ ಒತ್ತಡಕ್ಕೆ ಮಣಿದು ಏನೇನೋ ಮಾತನಾಡುತ್ತಿದ್ದಾರೆ. ಪ್ರತ್ಯೇಕ ಧರ್ಮದ ಅಗತ್ಯ ಹಾಗೂ ಅನಿವಾರ್ಯತೆ ನಮಗಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನ ಸಿಕ್ಕಿದರೆ ಬಹುತೇಕ ಸೌಲಭ್ಯಗಳು ಸಿಗುತ್ತವೆ. ಆದರೆ, ಆರೆಸ್ಸೆಸ್ ನವರು ಅನಗತ್ಯವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿಗೂ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡಿಲ್ಲ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಬಹಳ ಹಿಂದಿನಿಂದ ಚರ್ಚೆ ನಡೆಯುತ್ತಿದೆ. ವೀರಶೈವ ಮಹಾಸಭಾದವರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆಯೆ ಹೊರತು, ಮುಖ್ಯಮಂತ್ರಿ ಈ ವಿಷಯ ಪ್ರಸ್ತಾಪಿಸಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.







