ಢೋಂಗಿ ಜಾತ್ಯತೀತವಾದಿಗಳಿಗೆ ಮಣೆ ಹಾಕಬೇಡಿ: ಮುಖ್ಯಮಂತ್ರಿ
‘ನಮ್ಮ ಪಾಲಿಗೆ ರಾಜ್ಯದ ಮತದಾರರೇ ದೇವರು’

ಬೆಂಗಳೂರು, ಜು.25: ಢೋಂಗಿ ಜಾತ್ಯತೀತವಾದಿಯಾಗಿರುವ ಜೆಡಿಎಸ್‌ಗೆ ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲ. ಅವರಿಗೆ ಮಣೆ ಹಾಕಿದರೆ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳನ್ನು ಬೆಂಬಲಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಮ್ಮನಹಳ್ಳಿ ವಾರ್ಡ್‌ನಲ್ಲಿ ವಿವಿಧ ಕಲ್ಯಾಣ ಯೋಜನೆಗಳಡಿಯಲ್ಲಿ 4 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು.
ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕೆಲವು ಸ್ಥಾನಗಳನ್ನು ಗೆದ್ದು, ಅತಂತ್ರ ಸ್ಥಿತಿ ನಿರ್ಮಾಣವಾದಾಗ ಸಮ್ಮಿಶ್ರ ಸರಕಾರ ರಚಿಸಲು ನೆರವು ನೀಡಬಹುದಷ್ಟೇ. ಜೆಡಿಎಸ್ ಅವಕಾಶವಾದಿಗಳು, ಬಿಜೆಪಿ ಕೋಮುವಾದಿಗಳು, ಜೆಡಿಎಸ್ ಬೆಂಬಲಿಸಿದರೆ, ಕೋಮುವಾದಿಗಳನ್ನು ಅಧಿಕಾರಕ್ಕೆ ತಂದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ವರನಟ ಡಾ.ರಾಜ್‌ಕುಮಾರ್ ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು. ಆದರೆ, ನಮ್ಮ ಪಾಲಿಗೆ ರಾಜ್ಯದ ಮತದಾರರೇ ದೇವರು. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನಾವು ಮತದಾರರಿಗೆ ವರದಿ ಒಪ್ಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಆರೂವರೆ ಕೋಟಿ ಜನರಿಗೆ ನಾನಾ ರೀತಿಯ ಸೌಲಭ್ಯಗಳನ್ನು ಸರಕಾರ ಒದಗಿಸಿದೆ. ಹಿಂದಿನ ಯಾವುದೇ ಸರಕಾರಗಳು ಈ ಕೆಲಸ ಮಾಡಿಲ್ಲ. ರಾಜ್ಯದ ಎಲ್ಲ ಬಡವರಿಗೆ ನಾವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅವು ಜನರಿಗೆ ತಲುಪಬೇಕು. ಆ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಅಲ್ಪಸಂಖ್ಯಾತರಿಗೆ ರಾಜ್ಯದ ಬಜೆಟ್‌ನಲ್ಲಿ 2750 ಕೋಟಿ ರೂ.ಮೀಸಲಿಟ್ಟಿದೆ. ಇದಕ್ಕೆ ಬಿಜೆಪಿಯವರಿಂದ ಟೀಕೆ ವ್ಯಕ್ತವಾಯಿತು. ಅಲ್ಪಸಂಖ್ಯಾತರೂ ಈ ದೇಶದ ಪ್ರಜೆಗಳೇ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯ. ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ 165 ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವವರು ನಾವು. ನಾಲ್ಕು ಕೋಟಿಗೂ ಹೆಚ್ವು ಜನರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುತ್ತಿದ್ದೇವೆ. ಅದೇ ರೀತಿ 1.5 ಕೋಟಿ ಶಾಲಾ ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ. ಅವರಿಗೆ ಶೂ, ಸಾಕ್ಸ್, ಸಮವಸ್ತ್ರ ವಿತರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಾವು ಮಾಡಿರುವ ಕೆಲಸಗಳ ಬಗ್ಗೆ ಪ್ರಚಾರವಾಗುತ್ತಿಲ್ಲ. ನಾವು ಅದರಲ್ಲಿ ಹಿಂದೆ ಇದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಯಾವ ಕೆಲಸ ಮಾಡದಿದ್ದರೂ ಭರ್ಜರಿಯಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾರ್ಕೆಟಿಂಗ್ ಮಾಡುವಲ್ಲಿ ಅವರು ನಿಸ್ಸೀಮರು. ಅಚ್ಛೇ ದಿನ್ ಕೇವಲ ಬಾಯಿ ಮಾತಿನಲ್ಲಿ ಇದೆಯೇ ಹೊರತು ಕಾರ್ಯರೂಪಕ್ಕೆ ಈವರೆಗೆ ಬಂದಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ವಿದೇಶಗಳಿಂದ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ.ಜಮೆ ಮಾಡುವುದಾಗಿ ನರೇಂದ್ರಮೋದಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಬಡವರ ಖಾತೆಗೆ 15 ರೂ.ಗಳು ಬಂದಿಲ್ಲ. ಬಡವರು ಜನಧನ್ ಖಾತೆಗಳನ್ನು ತೆರೆದಿದ್ದರಿಂದ ಏನು ಪ್ರಯೋಜನವಾಯಿತು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಂಡಿಯಾ ಇಸ್ ಶೈನಿಂಗ್ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ದಲಿತರು, ಬಡವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಬದಕು ಹಸನಾಗಲಿಲ್ಲ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಮತ್ತಷ್ಟು ಬಡವರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
‘ಬಿಜೆಪಿ ನಡಿಗೆ ದಲಿತರ ಕಡೆಗೆ’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ದಲಿತರ ಮನೆಗೆ ಉಪಾಹಾರಕ್ಕೆ ತೆರಳಿ ಹೊಟೇಲ್‌ನಿಂದ ತಿಂಡಿ ತರಿಸಿಕೊಂಡು ತಿನ್ನುತ್ತಾರೆ. ಈ ರಾಜಕೀಯ ನಾಟಕದ ಬದಲು, ದಲಿತರ ಮನೆಯ ಹೆಣ್ಣನ್ನು ನಿಮ್ಮ ಮನೆಗೆ, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ನೀಡುವ ಮೂಲಕ ನೆಂಟಸ್ತನ ಬೆಳೆಸಿಕೊಂಡು ಸಾಮಾಜಿಕ ಬದಲಾವಣೆ ಮಾಡಿ ಎಂದು ಸಲಹೆ ನೀಡುತ್ತಿದ್ದಂತೆ, ಈಗ ದಲಿತರ ಮನೆಗೆ ಹೋಗುವುದನ್ನೆ ಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಪಾಲಿಕೆಯ ಆಸ್ತಿಗಳನ್ನೆ ಅಡಮಾನ ಇಟ್ಟಿದ್ದರು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಪಾಲಿಕೆಗೆ 110 ಹಳ್ಳಿಗಳನ್ನು ಸೇರಿಸಿ ಯಾವುದೆ ಸೌಲಭ್ಯವನ್ನು ಒದಗಿಸಿರಲಿಲ್ಲ. ನಾವು ಈಗ ಐದು ಸಾವಿರ ಕೋಟಿ ರೂ.ವೆಚ್ಚದಲ್ಲಿ ಆ ಹಳ್ಳಿಗಳಿಗೆ ನೀರು, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಭೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ಮೇಯರ್ ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬಿಬಿಎಂಪಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







