ಕೆಳಪರ್ಕಳ: ಅಪಾಯ ಆಹ್ವಾನಿಸುತ್ತಿರುವ ಮೃತ್ಯುಕೂಪ

ಉಡುಪಿ, ಜು.25: ಪರ್ಕಳ ಸಮೀಪದ ಕೆಳಪರ್ಕಳ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ತಿರುವಿನಲ್ಲಿರುವ ಮೃತ್ಯುಕೂಪವೊಂದು ಅಪಾಯಕ್ಕೆ ಆಹ್ವಾನಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧ ಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಲ್ಪೆ- ತೀರ್ಥಹಳ್ಳಿ ರಾಷ್ಟೀಯ ಹೆದ್ದಾರಿಯಲ್ಲಿರುವ ಈ ಮೃತ್ಯುಕೂಪ ರಸ್ತೆಯ ಬದಿಯಲ್ಲೇ ಇರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆ ರಾ.ಹೆ.ಯಾಗಿ ಪರಿವರ್ತನೆಗೊಂಡು ನಾಲ್ಕೈದು ವರ್ಷಗಳಾದರೂ ಇನ್ನೂ ಹೊಂಡ-ಗುಂಡಿಗಳಿಂದ ಮುಕ್ತಿ ಕಂಡಿಲ್ಲ. ಹಾಗಾಗಿ ಈ ರಸ್ತೆ ಸಂಚಾರಕ್ಕೆ ಅಯೋಗ್ಯ ಎನಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಮೃತ್ಯುಕೂಪದ ಕೆಳಗಡೆ ಸೇತುವೆ ಇದ್ದು, ಅದು ಶಿಥಿಲಾವಸ್ಥೆಯಲ್ಲಿದೆ. ಸೇತುವೆಯ ಎರಡು ಬದಿಯ ತಡೆಗೊಡೆಗಳು ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದ ಈ ಪ್ರದೇಶದಲ್ಲಿ ಸಂಚರಿಸುವಾಗ ವಾಹನ ಚಾಲಕರಿಗೆ ಭಯದ ವಾತಾವರಣ ನಿರ್ಮಿಸುತ್ತದೆ.
ಇಲಾಖಾ ಇಂಜಿನಿಯರಗಳು, ಜಿಲ್ಲಾಡಳಿತ, ಸಂಸದರು, ಜನಪ್ರತಿನಿಧಿಗಳು ಇತ್ತಕಡೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರಾದ ಕೆ.ಎಸ್ ರೈ ಅಚ್ಚುತನಗರ, ಗಣೇಶರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ ಮೊದಲಾದವರು ಆಗ್ರಹಿಸಿದ್ದಾರೆ.







