‘ನೌಕರರಲ್ಲಿ ಉತ್ತರದಾಯಿತ್ವದ ಪ್ರಜ್ಞೆ ಮೂಡಿಸಲು ಕೇಂದ್ರ ಸರಕಾರದ ಕಠಿಣ ಕ್ರಮ’

ಹೊಸದಿಲ್ಲಿ, ಜು.25: ಉದ್ಯೋಗಿಗಳಲ್ಲಿ ಹೊಣೆಗಾರಿಕೆ ಬೆಳಸಲು ‘ಸಾಧಿಸಿ ಇಲ್ಲವೇ ತೊಲಗಿ’ ಎಂಬ ಧ್ಯೇಯವಾಕ್ಯವನ್ನು ಕೇಂದ್ರ ಸರಕಾರ ಆಡಳಿತದಲ್ಲಿ ಅಳವಡಿಸಿಕೊಂಡಿದೆ ಎಂದು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಆರೋಪದಲ್ಲಿ 381 ಸರಕಾರಿ ಸೇವೆಯ ಅಧಿಕಾರಿಗಳ ವಿರುದ್ಧ ಅಕಾಲಿಕ ನಿವೃತ್ತಿ ಅಥವಾ ಸಂಬಳದಲ್ಲಿ ಕಡಿತ.. ಇತ್ಯಾದಿ ಕ್ರಮ ಕೈಗೊಳ್ಳಲಾಗಿದೆ. ಇವರಲ್ಲಿ 24 ಐಎಎಸ್ ಅಧಿಕಾರಿಗಳಿದ್ದಾರೆ.
ಈ ಕುರಿತ ಮಾಹಿತಿ ಇರುವ ಕೈಪಿಡಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ವಿದೇಶದಲ್ಲಿ ಸ್ಥಳ ನಿಯುಕ್ತಿಗೊಂಡಿರುವ ಅಧಿಕಾರಿಗಳು ಅನುಮೋದಿತ ಅವಧಿ ಮೀರಿ ಈ ಕೆಲಸದಲ್ಲಿ ನಿಯೋಜನೆಗೊಂಡಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ರೀತಿಯ ಕಠಿಣ ಕ್ರಮಗಳಿಂದ ಸರಕಾರಿ ಸಿಬ್ಬಂದಿಗಳಲ್ಲಿ ಶಿಸ್ತು ಮತ್ತು ಉತ್ತರದಾಯಿತ್ವದ ಪ್ರಜ್ಞೆ ಮೂಡುತ್ತದೆ. 11,828 ಗ್ರೂಫ್ ಎ ಅಧಿಕಾರಿಗಳ ಹಾಗೂ 19,714 ಗ್ರೂಫ್ ಬಿ ಅಧಿಕಾರಿಗಳ ಸೇವಾ ದಾಖಲೆಯನ್ನು ಪರಿಶೀಲಿಸಲಾಗಿದೆ. 25 ಗ್ರೂಫ್ ಎ ಅಧಿಕಾರಿಗಳು, 99 ಗ್ರೂಫ್ ಬಿ ಅಧಿಕಾರಿಗಳನ್ನು ಅಕಾಲಿಕ ನಿವೃತ್ತಿಗೊಳಿಸಲಾಗಿದೆ. ಅಲ್ಲದೆ 37 ಗ್ರೂಫ್ ಎ ಅಧಿಕಾರಿಗಳು ಹಾಗೂ 199 ಗ್ರೂಫ್ ಬಿ ಅಧಿಕಾರಿಗಳಿಗೆ ವಜಾಗೊಳಿಸುವಿಕೆ, ಕಡ್ಡಾಯ ನಿವೃತ್ತಿ, ಪಿಂಚಣಿಯಲ್ಲಿ ಕಡಿತ.. ಇತ್ಯಾದಿ ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ ತಪ್ಪಿತಸ್ತರನ್ನು ಮುಲಾಜಿಲ್ಲದೆ ಶಿಕ್ಷಿಸಲಾಗುವುದು ಎಂಬ ಸಂದೇಶವನ್ನು ನಿದರ್ಶನ ಸಹಿತ ತೋರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.





