ರಾಣಾಪ್ರತಾಪ್ ಎದುರು ಅಕ್ಬರ್‌ಗೆ ಸೋಲು, ಗಾಂಧಿ, ನೆಹರು ಉಲ್ಲೇಖವಿಲ್ಲ..!
ಇತಿಹಾಸವನ್ನು ‘ತಿದ್ದಿಬರೆದ’ ಬಿಜೆಪಿ ಆಡಳಿತದ ರಾಜ್ಯಗಳು

ಜೈಪುರ, ಜು.25: ರಾಜಸ್ತಾನ ವಿವಿಯ ಬಿಬಿಎ ಪದವಿ ಪಠ್ಯಪುಸ್ತಕದಲ್ಲಿ ಪುರಾಣ, ಯೋಗ, ಆಧ್ಯಾತ್ಮಿಕದ ಕುರಿತ ಪಾಠಗಳನ್ನು ಅಳವಡಿಸಲಾಗಿದೆ. ಈ ಮಧ್ಯೆ, ರಾಜಸ್ತಾನ ವಿವಿ ಹೊಸ ಪುಸ್ತಕವೊಂದನ್ನು ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಸುಮಾರು 450 ವರ್ಷಗಳ ಹಿಂದೆ ನಡೆದ ಯುದ್ದದಲ್ಲಿ ಮಹಾರಾಣಾ ಪ್ರತಾಪ್ ಅಕ್ಬರ್‌ನನ್ನು ಸೋಲಿಸಿದ್ದ ಎಂದು ಹೇಳಲಾಗಿದೆ.
ನಿವೃತ್ತ ಇತಿಹಾಸ ಪ್ರಾಧ್ಯಾಪಕ ಕೆ.ಎಸ್.ಗುಪ್ತ ಎಂಬವರು ಬರೆದ ‘ಮಹಾರಾಣಾ ಪ್ರತಾಪ್, ಕುಂಬಲ್‌ಗರ್ ಸೆ ಚಾವಂದ್’ ಎಂಬ ಪುಸ್ತಕದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. ಸಮಕಾಲೀನ ಪರ್ಶಿಯನ್ ದಾಖಲೆ, ರಾಜಸ್ತಾನೀ ಮೂಲಗಳು ಹಾಗೂ ಸಾಂದರ್ಭಿಕ ಅಧ್ಯಯನದಿಂದ ತನಗೆ ಈ ಮಾಹಿತಿ ದೊರೆತಿದೆ ಎಂದು ಗುಪ್ತ ಹೇಳಿದ್ದಾರೆ.
ಈ ಬದಲಾವಣೆಯನ್ನು ಸ್ವಾಗತಿಸಿರುವ ರಾಜಸ್ತಾನದ ಶಿಕ್ಷಣ ಸಚಿವ ವಾಸುದೇವ್ ದೇವ್‌ನಾನಿ, ವಿದ್ಯಾರ್ಥಿಗಳು ವಿಕೃತ ಇತಿಹಾಸವನ್ನು ಓದಬಾರದು ಎಂದು ತಿಳಿಸಿದ್ದಾರೆ.
ಅಲ್ಲದೆ ರಾಜಸ್ತಾನದ 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಜವಾಹರ್‌ಲಾಲ್ ನೆಹ್ರೂ ಅವರ ಹೆಸರನ್ನು ಕಿತ್ತುಹಾಕಲಾಗಿದೆ.
ಈ ಪುಸ್ತಕದಲ್ಲಿ ಭಾರತದ ಪ್ರಪ್ರಥಮ ಪ್ರಧಾನಿ ಯಾರು ಎಂಬ ಬಗ್ಗೆ ಅಥವಾ ಮಹಾತ್ಮಾ ಗಾಂಧಿಯನ್ನು ನಾಥೂರಾಂ ಗೋಡ್ಸೆ ಹತ್ಯೆ ಮಾಡಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 10 ಮತ್ತು 12ನೇ ತರಗತಿಯ ಹೊಸ ಪಠ್ಯಪುಸ್ತಕದಲ್ಲಿ ಕೂಡಾ ನೆಹ್ರೂ ಕುರಿತು ಉಲ್ಲೇಖವಿಲ್ಲ. ಆದರೆ ಗಾಂಧೀಜಿ ಬಗ್ಗೆ ಸ್ವಲ್ಪ ಪ್ರಸ್ತಾಪವಿದೆ. ಇದರ ಬದಲು ಆರೆಸ್ಸೆಸ್ ಸಿದ್ಧಾಂತವಾದಿ ವೀರ ಸಾವರ್ಕರ್ ಬಗ್ಗೆ ವಿವರವಾದ ಅಧ್ಯಾಯವಿದೆ. ಅವರೋರ್ವ ಉನ್ನತ ಕ್ರಾಂತಿಕಾರಿ ನಾಯಕ ಮತ್ತು ಓರ್ವ ಶ್ರೇಷ್ಠ ದೇಶಭಕ್ತ ಎಂದು ವರ್ಣಿಸಲಾಗಿದೆ. 11ನೇ ತರಗತಿಯ ರಾಜನೀತಿ ವಿಜ್ಞಾನ ಪಠ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಬ್ರಿಟಿಷರು ಪೋಷಿಸಿದ ಶಿಶು’ ಎಂದು ವರ್ಣಿಸಲಾಗಿದೆ.
ಬಿಜೆಪಿ ಆಡಳಿತವಿರುವ ಹರ್ಯಾನಾದಲ್ಲಿ 7ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇರುವ ನೈತಿಕ ವಿಜ್ಞಾನ ಪಠ್ಯ ಆರಂಭವಾಗುವುದೇ ಸರಸ್ವತಿ ವಂದನ ಎಂಬ ಶ್ಲೋಕದಿಂದ. ಆರೆಸ್ಸೆಸ್‌ನ ವಿವಾದಾಸ್ಪದ ಸಂಯೋಜಕರಾಗಿರುವ ದೀನಾನಾಥ್ ಬಾತ್ರ ಎಂಬವರು ಈ ಪುಸ್ತಕ ಬರೆದಿದ್ದಾರೆ. ಮಂತ್ರ ಪಠಣೆಯಿಂದ ಜ್ಞಾನ ಮತ್ತು ತಿಳುವಳಿಕೆ ದೊರಕುತ್ತದೆ ಎಂದವರು ಹೇಳುತ್ತಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮತ್ತು ಭಾರತೀಯ ವೌಲ್ಯಗಳನ್ನು ತುಂಬುವ ಉದ್ದೇಶದಿಂದ ಈ ಪುಸ್ತಕಗಳನ್ನು ರಚಿಸಲಾಗಿದೆ ಎನ್ನುತ್ತಾರೆ ಬಾತ್ರ. ಶಾಲೆಯಲ್ಲಿ ಈ ಪುಸ್ತಕಗಳನ್ನು ಓದುವುದನ್ನು ಗುಜರಾತ್ ಸರಕಾರ ಕೂಡಾ ಕಡ್ಡಾಯಗೊಳಿಸಿದೆ.
ಗುಜರಾತ್‌ನಲ್ಲಿ ಪಠ್ಯಪುಸ್ತಕಗಳನ್ನು ತಿರುಚುವ ಕಾರ್ಯ, 1995ರಿಂದ, ಅಂದರೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಕ್ಕಿಂತಲೂ ಹಿಂದೆ ಆರಂಭಗೊಂಡಿತ್ತು. 1995ರಲ್ಲಿ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ 9ನೇ ತರಗತಿಯ ಪಠ್ಯಪುಸ್ತಕದಲ್ಲಿ - ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳನ್ನು ವಿದೇಶೀಯರು ಎಂದು ಉಲ್ಲೇಖಿಸಲಾಗಿತ್ತು. ಬಹುತೇಕ ರಾಜ್ಯದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಬಹುಸಂಖ್ಯಾತರಾಗಿದ್ದಾರೆ ಎಂದೂ ಬರೆಯಲಾಗಿತ್ತು. ಈ ಪುಸ್ತಕವನ್ನು ಗುಜರಾತ್ ಶಾಲಾ ಪಠ್ಯಪುಸ್ತಕ ಮಂಡಳಿ ಪ್ರಕಟಿಸಿತ್ತು.ಅಲ್ಲದೆ 10ನೇ ತರಗತಿಯ ಪಠ್ಯದಲ್ಲಿ ಹಿಟ್ಲರ್‌ನನ್ನು ‘ಹೀರೊ’ ಎಂದು ವರ್ಣಿಸಲಾಗಿತ್ತು ಮತ್ತು ಆತ ಜರ್ಮನ್ ಸರಕಾರಕ್ಕೆ ಘನತೆ ಮತ್ತು ಪ್ರತಿಷ್ಠೆಯನ್ನು ದೊರಕಿಸಿಕೊಟ್ಟಿದ್ದ ಎಂದು ಹೇಳಲಾಗಿತ್ತು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಬಳಿಕ ಈ ಪುಸ್ತಕವನ್ನು ಹಿಂಪಡೆಯಲಾಗಿತ್ತು.
ಹಲ್ದೀಘಾಟಿ ಕದನ
1576ರ ಜೂನ್ 18ರಂದು ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ಮೇವಾಡದ ರಾಜ ಮಹಾರಾಣಾ ಪ್ರತಾಪ್ ಮಧ್ಯೆ ಹಲ್ದೀಘಾಟ್ ಎಂಬಲ್ಲಿ ನಡೆದ ಯುದ್ದದಲ್ಲಿ ಅಕ್ಬರ್ ಗೆದ್ದಿದ್ದ ಮತ್ತು ಮಹಾರಾಣಾ ಪ್ರತಾಪ್ ಯುದ್ದರಂಗದಿಂದ ಪಲಾಯನ ಮಾಡಿದ್ದ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಹೀಗೆ ಪಲಾಯನ ಮಾಡಿದ್ದ ಮಹಾರಾಣಾ ಪ್ರತಾಪ್, ಆ ಬಳಿಕವೂ ಮೊಘಲರ ವಿರುದ್ಧ ‘ಗೆರಿಲ್ಲ ಯುದ್ದ’ ಮುಂದುವರಿಸಿದ್ದ.







