ಬ್ಯಾಂಕ್ ಖಾತೆಗೆ ಕನ್ನ ಪ್ರಕರಣ:ನಾಲ್ವರು ಸಿಐಡಿ ಬಲೆಗೆ

ಬೆಂಗಳೂರು, ಜು.25: ಐಷಾರಾಮಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹಲವಾರು ವೆಬ್‌ಸೈಟ್‌ಗಳನ್ನು ತೆರೆದು ವೆಬ್‌ಸೈಟ್‌ಗೆ ಭೇಟಿ ನೀಡಿದ ಸಾರ್ವಜನಿಕರ ಬ್ಯಾಂಕ್ ಖಾತೆ ವಿವರ ಪಡೆದು ವಂಚಿಸುತ್ತಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ಭಾರತ ಮೂಲದ ಕಪಿಲ್‌ದೇವ್, ಸೂರಜ್ ಕುಮಾರ್, ಸುಶೀಲ್ ಕುಮಾರ್, ಬಿಪ್ಲವ್ ಕುಮಾರ್ ಬಂಧಿತ ಆರೋಪಿಗಳೆಂದು ಸಿಐಡಿ ಹೇಳಿದೆ.
ಬಂಧಿತರು ಮ್ಯುನಿಫಾಪೆರಡೇ ಡಾಟ್ ಕಾಂ, ಮ್ಯುನಿಫಾಡೈಲಿ ಡಾಟ್‌ಕಾಂ, ಪಯಾಮಸ್ ಡಾಟ್ ಕಾಂ ಸೇರಿದಂತೆ ಹಲವಾರು ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಹೆಚ್ಚು ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದರು. ಮ್ಯುನಿಫಾಪೆರಡೇ ಡಾಟ್ ಕಾಂನಲ್ಲಿ 1 ಸಾವಿರ ರೂ. ದಿಂದ 1.8 ಲಕ್ಷ ರೂ. ವರೆಗೆ ಹೂಡಿಕೆ ಮಾಡುವವರಿಗೆ, ಶೇ.2ರಷ್ಟು ಬಡ್ಡಿ ನೀಡುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಕೆಲ ಗ್ರಾಹಕರು ವೆಬ್‌ಸೈಟ್‌ನಲ್ಲಿ ತಮ್ಮ ಬ್ಯಾಂಕ್‌ನ ವಿವರಗಳನ್ನು ನಮೂದಿಸಿದಾಗ, ಆರೋಪಿಗಳು ಅದನ್ನು ನಕಲು ಮಾಡಿ, ಗ್ರಾಹಕರ ಬ್ಯಾಂಕ್ ಖಾತೆಗಳಿಂದ 2 ಸಾವಿರದಿಂದ 3 ಸಾವಿರ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಬಳಿಕ ಯಾವುದೇ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ನೀಡುತ್ತಿರಲಿಲ್ಲ ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ.
16 ಸಾವಿರ ಬ್ಯಾಂಕ್ ಖಾತೆ: ಬೆಂಗಳೂರಿನ ಗ್ರಾಹಕರೊಬ್ಬರಿಗೆ ತಮ್ಮ ಖಾತೆಯಿಂದ 2,500 ಸಾವಿರ ಹಣ ವರ್ಗಾವಣೆಯಾಗಿರುವ ಬಗ್ಗೆ ತಮ್ಮ ಮೊಬೈಲ್‌ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸಿಐಡಿ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು. ಪ್ರಕರಣವನ್ನು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 16 ಸಾವಿರಕ್ಕೂ ಅಧಿಕ ಗ್ರಾಹಕರ ಬ್ಯಾಂಕ್ ಖಾತೆಗಳ ವಿವರಗಳನ್ನು ಹೊಂದಿದ್ದ ಆರೋಪಿಗಳು, 40ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ. 460ಕ್ಕೂ ಅಧಿಕ ಮೊಬೈಲ್ ಸಿಮ್ ಹೊಂದಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಅಧರ್ಕ್ಕೆ ಮೊಟಕುಗೊಳಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಸಿಐಡಿ ಎಡಿಜಿಪಿ ಪ್ರತಾಪ್‌ರೆಡ್ಡಿ ತಿಳಿಸಿದ್ದಾರೆ.







