ಅಂಬೇಡ್ಕರ್ ಸಮಾವೇಶಕ್ಕೆ ದಲಿತರ ಹಣ ದುರುಪಯೋಗ: ಬಿಜೆಪಿ ಆರೋಪ
ಬೆಂಗಳೂರು,ಜು. 25: ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ರಾಜ್ಯ ಸರಕಾರ ದುರುಪಯೋಗಪಡಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಟೀಕಿಸಲೆಂದೆ ಅಂತಾರಾಷ್ಟ್ರೀಯ ಅಂಬೇಡ್ಕರ್ ಸಮಾವೇಶವನ್ನು ನಡೆಸಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ಸೋಮಶೇಖರ್ ಟೀಕಿಸಿದ್ದಾರೆ.
ಮಂಗಳವಾರ ನಗರದ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿಗರನ್ನು ಹೊರಗಿಟ್ಟು ವಲಸಿಗ ಕಾಂಗ್ರೆಸ್ಸಿಗರ ಸಮಾವೇಶ ಇದಾಗಿತ್ತು. ಬಾಬಾ ಸಾಹೇಬರ ಬಗ್ಗೆ ಗೊತ್ತಿಲ್ಲದವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂಬಾಲಕರಿಗೆ ಮಾತ್ರ ಸಮಾವೇಶದಲ್ಲಿ ಮಣೆ ಹಾಕಲಾಗಿತ್ತು ಎಂದು ಛೇಡಿಸಿದರು.
ಮಾರ್ಟಿನ್ ಲೂಥರ್ ಕಿಂಗ್-3 ಅವರಿಗೆ ಅಂಬೇಡ್ಕರ್ ಬಗ್ಗೆ ಏನೂ ಗೊತ್ತಿಲ್ಲ. ಬಾಬಾ ಸಾಹೇಬರ ಕುರಿತು ಮಾತನಾಡಲು ಕಾಂಗ್ರೆಸ್ಸಿಗರಿಗೆ ನೈತಿಕತೆ ಇಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ವಿ.ಪಿ.ಸಿಂಗ್ ಸರಕಾರ. ದಲಿತರ ಓಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಬಳಸಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಕರೆದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಕಡೆಗಣಿಸಲಾಗಿತ್ತು. ಎಸ್ಸಿಪಿ ಟಿಎಸ್ಪಿ ಯೋಜನೆಗೆ ಮೀಸಲಿಟ್ಟಿದ ಅನುದಾನದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಸಮಾವೇಶ ನಡೆಸಿದ್ದಾರೆ. ಈ ಸಮಾವೇಶದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಒಡೆದಾಳುವ ನೀತಿ; ಲಿಂಗಾಯತ ಸಮುದಾಯವನ್ನು ಒಡೆದಾಳಲು ಪ್ರತ್ಯೇಕ ಧರ್ಮದ ಸ್ಥಾನಮಾನದ ಕುರಿತು ಮಾತನಾಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಲಿಂಗಾಯತ ಧರ್ಮ ಸ್ಥಾಪನೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಈಗಾಗಲೇ ಲಿಂಗಾಯತ ಸಮುದಾಯದ ಕುರಿತು ಬಿಜೆಪಿ ಸ್ಪಷ್ಟ ನಿಲುವು ಪ್ರಕಟಿಸಿದೆ. ಈ ನಿಲುವಿಗೆ ನಾನು ಬದ್ಧ ಎಂದು ತಿಳಿಸಿದರು.







