ಸೆ.7ರೊಳಗೆ 1,500 ಕೋ.ರೂ. ಜಮೆ ಮಾಡುವಂತೆ ಸಹರಾಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಹೊಸದಿಲ್ಲಿ, ಜು. 25: ಸೆಬಿ ಮರುಪಾವತಿ ಖಾತೆಗೆ ಸೆಪ್ಟಂಬರ್ 7ರ ಒಳಗೆ 1,500 ಕೋಟಿ ರೂಪಾಯಿ ಜಮೆ ಮಾಡುವಂತೆ ಸಹರಾ ಗುಂಪಿನ ಮುಖ್ಯಸ್ಥ ಸುಬ್ರತಾ ರಾಯ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಸಹಾರಾ ಮುಖ್ಯಸ್ಥ ಭರವಸೆ ನೀಡಿದಂತೆ ಜುಲೈ 15ರ ಒಳಗೆ ಮರುಪಾವತಿ ಖಾತೆಗೆ 552.21 ಕೋಟಿ ರೂಪಾಯಿ ಜಮೆ ಮಾಡಬೇಕಿತ್ತು. ಆದರೆ, 247 ಕೋಟಿ ರೂಪಾಯಿ ಜಮೆ ಮಾಡಿದ್ದಾರೆ ಎಂದು ಸುಬ್ರತಾ ರಾಯ್ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್‌ಗೆ ದೀಪಕ್ ಮಿಶ್ರ ನೇತೃತ್ವದ ಮೂರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದ್ದಾರೆ.
ಒಟ್ಟು ಮೊತ್ತ 552.21 ಕೋಟಿ ರೂಪಾಯಿಯಲ್ಲಿ ಬಾಕಿ 305.21 ಕೋಟಿ ರೂಪಾಯಿಯನ್ನು ಜುಲೈ 15ರ ಒಳಗೆ ಮರುಪಾವತಿ ಖಾತೆಯಲ್ಲಿ ಜಮೆ ಮಾಡಲಾಗುವುದು ಎಂದು ನ್ಯಾಯಾಮೂರ್ತಿಗಳಾದ ರಂಜನ್ ಗೊಗೋಯ್, ಎ.ಕೆ. ಸಕ್ರಿ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಸಿಬಲ್ ತಿಳಿಸಿದ್ದಾರೆ.
ರಾಯ್ 1500 ಕೋಟಿ ರೂಪಾಯಿಯನ್ನು ಸೆಪ್ಟಂಬರ್ 7ರ ಒಳಗೆ ಜಮೆ ಮಾಡಬೇಕು. ಇದು ಬಾಕಿ ಮೊತ್ತ 305.21 ಕೋಟಿ ರೂಪಾಯಿ ಒಳಗೊಂಡಿದೆ ಎಂದು ಪೀಠ ಹೇಳಿದೆ.
ಈ ಹಿಂದೆ ಅಕ್ಟೋಬರ್ 10ರ ವರೆಗೆ ನೀಡಲಾದ ಪರೋಲ್ ಅನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಹಾಗೂ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್ 11ಕ್ಕೆ ನಿಗದಿಪಡಿಸಿದೆ.







