ಶಿಕ್ಷೆ ಕಡಿತಗೊಳಿಸುವಂತೆ ರಾಷ್ಟ್ರಪತಿಯನ್ನು ಕೋರಿದ ನ್ಯಾಯಮೂರ್ತಿ ಕರ್ಣನ್

ಹೊಸದಿಲ್ಲಿ, ಜು. 25: ಕೋಲ್ಕತಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ತನಗೆ ವಿಧಿಸಿರುವ ಆರು ತಿಂಗಳ ಕಾರಾಗೃಹ ಶಿಕ್ಷೆ ಕಡಿತಗೊಳಿಸುವಂತೆ ನೂತನ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರನ್ನು ಕೋರಿ ತನ್ನ ಕಾನೂನು ಸಲಹೆಗಾರರ ತಂಡದ ಮೂಲಕ ಮಂಗಳವಾರ ರಾಷ್ಟ್ರಪತಿ ಭವನಕ್ಕೆ ಇ-ಮೇಲ್ ರವಾನಿಸಿದ್ದಾರೆ.
ಪ್ರಸ್ತುತ ಕರ್ಣನ್ ನ್ಯಾಯಾಂಗ ನಿಂಧನೆ ಅಪರಾಧದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೋಲ್ಕತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾರೆ. ನೂತನ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಲು ಹಾಗೂ ಇ-ಮೇಲ್ ಮೂಲಕವೂ ಅರ್ಜಿ ಸಲ್ಲಿಸಲು ಆರಂಭದಲ್ಲಿ ಯೋಜಿಸಲಾಗಿತ್ತು ಎಂದು ಕರ್ಣನ್‌ನ ಕಾನೂನು ಸಲಹೆಗಾರರ ತಂಡ ತಿಳಿಸಿದೆ.
ನಾವು ಕರ್ಣನ್ ಅವರ ಅರ್ಜಿಯನ್ನು ನೂತನ ರಾಷ್ಟ್ರಪತಿಗೆ ತಲುಪುವಂತೆ ಅವರ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಹಾಗೂ ಖಾಸಗಿ ಕಾರ್ಯದರ್ಶಿಗೆ ಮಂಗಳವಾರ 11 ಗಂಟೆಗೆ ಈ-ಮೇಲ್ ಮಾಡಿದ್ದೇವೆ. ಇದುವರೆಗೆ ಪ್ರತಿಕ್ರಿಯೆ ಸ್ವೀಕರಿಸಿಲ್ಲ. ಪೋಸ್ಟ್ ಮೂಲಕವೂ ನಾವು ಅರ್ಜಿಯನ್ನು ರಾಷ್ಟ್ರಪತಿಗೆ ರವಾನಿಸಿದ್ದೇವೆ ಎಂದು ಕರ್ಣನ್ ಪರ ವಕೀಲ ಎ.ಸಿ. ಫಿಲಿಪ್ ತಿಳಿಸಿದ್ದಾರೆ.
ಆದಾಗ್ಯೂ, ಮಂಗಳವಾರ ರಾಷ್ಟ್ರಪತಿ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಅವರನ್ನು ಮುಖತಃ ಭೇಟಿಯಾಗಿ ಅರ್ಜಿ ಸಲ್ಲಿಸಲು ಕರ್ಣನ್ ವಕೀಲರಿಗೆ ಸಾಧ್ಯವಾಗಿಲ್ಲ. ರಾಷ್ಟ್ರಪತಿ ಅವರನ್ನು ಅಥವಾ ಅವರನ್ನು ಭೇಟಿಯಾಗಲು ನಾವು ಸಮಯಾವಕಾಶ ಕೇಳಿದ್ದೆವು. ಆದರೆ, ರಾಷ್ಟ್ರಪತಿ ಅವರ ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಅದು ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿತ್ತು ಎಂದು ಫಿಲಿಪ್ ತಿಳಿಸಿದ್ದಾರೆ.







