ಮಹಿಳಾ ಗ್ರಾಮಕರಣಿಕೆಗೆ ಹಲ್ಲೆ: ದೂರು

ಬೆಳ್ತಂಗಡಿ, ಜು. 25: ಮಹಿಳಾ ಗ್ರಾಮಕರಣಿಕೆ ಮೇಲೆ ವ್ಯಕ್ತಿಯೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ನಡೆಸಿರುವ ಬಗ್ಗೆ ವೇಣೂರು ಠಾಣಾ ವ್ಯಾಪ್ತಿಯ ಬಳೆಂಜದಲ್ಲಿ ಮಂಗಳವಾರ ನಡೆದಿದೆ.
ಕರ್ತವ್ಯದಲ್ಲಿದ್ದ ಬಳೆಂಜ ಗ್ರಾಮ ಗ್ರಾಮಕರಣಿಕೆ ಮೇಘನಾ (26) ಎಂಬವರಿಗೆ ಕಾಪಿನಡ್ಕ ನಿವಾಸಿ ಅಶೋಕ್ ಆಚಾರ್ಯ ಎಂಬಾತ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿರುವ ಘಟನೆ ಬಳೆಂಜ ಗ್ರಾಮರಣಿಕರ ಕಚೇರಿಯಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಗ್ರಾಮಕರಣಿಕರ ಕಚೇರಿಗೆ ಬಂದ ಅಶೋಕ್ ಆಚಾರ್ಯ ಕಡತದ ಮಾಹಿತಿಯನ್ನು ಕೇಳಿ ನಂತರ ಏಕಾಏಕಿ ಕೋಪಗೊಂಡ ಅಶೋಕ್ ಮೇಘನಾ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಆಘಾತಕ್ಕೆ ಒಳಗಾದ ಮೆಘನಾ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಅರಿತ ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇ ಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬುಧವಾರ ಬೆಳಗ್ಗೆ ಕಂದಾಯ ಇಲಾಖೆಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಲಿದ್ದು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಅಶೋಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ನೀಡಲಿದ್ದಾರೆ. ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗದಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇ ಸ್ವಾಮಿ ತಿಳಿಸಿದ್ದಾರೆ.
ಖಂಡನೆ: ಕರ್ತವ್ಯದಲ್ಲಿದ್ದ ಬಳೆಂಜ ಗ್ರಾಮಕರಣಿಕೆ ಮೇಘನಾ ಅವರ ಮೇಲೆ ಹಲ್ಲೆ ಕೃತ್ಯವನ್ನು ದಸಂಸ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಚಂದು ಎಲ್, ತಾಲೂಕು ಮುಖಂಡರಾದ ಬಿ.ಕೆ. ವಸಂತ್, ವೆಂಕಣ್ಣ ಕೊಯ್ಯೂರು, ಸೇಸಪ್ಪ ಅಳದಂಗಡಿ ಖಂಡಿಸಿದ್ದು, ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದ್ದಾರೆ.







