ಸೇನೆಗೆ ಸೇರಿದ 10,000 ಎಕರೆ ಪ್ರದೇಶ ಅತಿಕ್ರಮಣ : ಸರಕಾರದ ಹೇಳಿಕೆ

ಹೊಸದಿಲ್ಲಿ, ಜು.25: ಸೇನಾಪಡೆಗೆ ಸೇರಿದ ಸುಮಾರು 10,220 ಎಕರೆ ಪ್ರದೇಶ ಕೇಂದ್ರ ಮತ್ತು ರಾಜ್ಯ ಸರಕಾರಿ ಇಲಾಖೆಗಳೂ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಅತಿಕ್ರಮಣಕ್ಕೆ ಒಳಗಾಗಿವೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್ ಭಾಮ್ರೆ ಈ ವಿಷಯ ತಿಳಿಸಿದರು. ಸೇನೆಗೆ ಸೇರಿದ ಒಟ್ಟು 10,220 ಎಕರೆ ಭೂಭಾಗವನ್ನು ಕೇಂದ್ರ, ರಾಜ್ಯ ಸರಕಾರದ ಇಲಾಖೆಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು, ಖಾಸಗಿ ಕ್ಷೇತ್ರದ ಸಂಸ್ಥೆಗಳು, ಕೊಳೆಗೇರಿ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದವರು ಹೇಳಿದರು.
ಖಾಸಗಿ ರಕ್ಷಣಾ ಉದ್ಯಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, 2001ರಿಂದ 205 ಭಾರತೀಯ ಕಂಪನಿಗಳಿಗೆ ಒಟ್ಟು 342 ಕೈಗಾರಿಕಾ ಲೈಸೆನ್ಸ್ ಮಂಜೂರುಗೊಳಿಸಲಾಗಿದೆ. ಈ ಕಂಪನಿಗಳು ಭದ್ರತಾ ಮಾನದಂಡಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಾಕಷ್ಟು ಭದ್ರತೆ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ .ಈ ಕಂಪನಿಗಳು ಉತ್ಪಾದಿಸುವ ರಕ್ಷಣಾ ಉತ್ಪನ್ನಗಳನ್ನು ಮುಖ್ಯವಾಗಿ ರಕ್ಷಣಾ ಇಲಾಖೆಗೆ ಮಾರಾಟ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಅಲ್ಲದೆ ಗೃಹ ಇಲಾಖೆಯ ಅಧೀನದಲ್ಲಿರುವ ಸರಕಾರಿ ಇಲಾಖೆಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು, ರಾಜ್ಯ ಸರಕಾರಗಳು ಹಾಗೂ ಇತರ ಪರವಾನಿಗೆ ಪಡೆದ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.







