ನಕಲಿ ಚಿನ್ನ ಅಡವಿಟ್ಟು 4.5 ಕೋಟಿ ರೂ. ವಂಚನೆ: ದಂಪತಿ ಸೆರೆ

ಸಾಂದರ್ಭಿಕ ಚಿತ್ರ
ಮಂಗಳೂರು, ಜು. 25: ನಗರದ ಫಳ್ನೀರ್ ರಸ್ತೆಯಲ್ಲಿರುವ ಕೆಥೋಲಿಕ್ ಸಿರಿಯನ್ ಬ್ಯಾಂಕ್ನಲ್ಲಿ ಚಿನ್ನ ಲೇಪಿತ ಕಂಚಿನ ಆಭರಣಗಳನ್ನು ಅಡವಿಟ್ಟು 4.5 ಕೋಟಿ ರೂ. ಸಾಲ ಪಡೆದು ವಂಚಿಸಿರುವ ದಂಪತಿಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೊಂದೇಲ್ ಸಮೀಪದ ಮೇರಿಹಿಲ್ ನಿವಾಸಿಗಳಾದ ವಿದ್ಯಾನಂದ ರಾವ್ (59) ಮತ್ತು ಆತನ ಪತ್ನಿ ಲಲಿತಾ ರಾವ್ (52) ಎಂದು ಗುರುತಿಸಲಾಗಿದೆ.
ವಿದ್ಯಾನಂದ ರಾವ್ 38 ಬಾರಿ ಮತ್ತು ಲಲಿತಾ ರಾವ್ ಒಂಬತ್ತು ಬಾರಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕ್ಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಕಲಿ ಚಿನ್ನ ಅಡವಿಟ್ಟು 65 ಲಕ್ಷ ರೂ. ಸಾಲ ಪಡೆದಿದ್ದ ಶಂಕರ ಆಚಾರ್ಯ ಎಂಬವವರ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಘಟನೆಯ ಬಳಿಕ ನಗರದ ಕೆಲವು ಬ್ಯಾಂಕ್ಗಳು ತಮ್ಮಲ್ಲಿ ಅಡವಿಟ್ಟ ಚಿನ್ನದ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ. ಕೆಥೋಲಿಕ್ ಸಿರಿಯನ್ ಬ್ಯಾಂಕ್ ಅಧಿಕಾರಿಗಳು ಚಿನ್ನದ ಮೇಲಿನ ಸಾಲದ ಖಾತೆಗಳ ತಪಾಸಣೆ ನಡೆಸಿದ್ದು, ಈ ಸಂದರ್ಭ ನಕಲಿ ಚಿನ್ನ ಅಡವಿಟ್ಟಿರುವುದು ಪತ್ತೆಯಾಗಿದೆ.
ನಕಲಿ ಚಿನ್ನ ಅಡವಿಟ್ಟಿರುವುದನ್ನು ಖಾತರಿಪಡಿಸಿಕೊಂಡ ಬ್ಯಾಂಕ್ ಅಧಿಕಾರಿಗಳು, ಮಂಗಳವಾರ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಶಾಂತಾರಾಮ್, ಸಬ್ಇನ್ಸ್ಪೆಕ್ಟರ್ ಮದನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.







