ದಾವಣಗೆರೆ: ಕಾನೂನು ಜ್ಞಾನ ಪ್ರಸಾರ 2017-18 ಕಾರ್ಯಕ್ರಮ

ದಾವಣಗೆರೆ, ಜು.26 : ಶಿಕ್ಷಣವು ಕೇವಲ ಅಂಕ ಗಳಿಸುವ ಮಾನದಂಡವಾಗದೇ, ಮಾನವೀಯತೆ ಬೆಳೆಸುವ ಕ್ಷೇತ್ರವಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಶ್ರೀದೇವಿ ಅಭಿಪ್ರಾಯಪಟ್ಟರು.
ಬುಧವಾರ ಮಾನವ ಹಕ್ಕುಗಳ ವೇದಿಕೆ, ಡಿಆರ್‌ಆರ್ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಜ್ಞಾನ ಪ್ರಸಾರ 2017-18 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಹಂತದ ಮಕ್ಕಳಾಗಲೀ ಇಷ್ಟಪಟ್ಟು ಓದಬೇಕೇ ವಿನಹ ಕಷ್ಟಪಟ್ಟು ಓದುವ ಸ್ಥಿತಿ ಬರಬಾರದು. ಪೋಷಕರು, ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಲು ಸಾಕಷ್ಟು ಶ್ರಮ ಪಡುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ಮೂಲಕ ನೈತಿಕತೆ ಹೊಂದಿದ ಮಕ್ಕಳಾಗಿ, ಶಿಕ್ಷಣ ಕೊಟ್ಟ ಸಂಸ್ಥೆಗೆ ಹೆಸರು ತರುವ ಕೆಲಸ ಮಾಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಕನಿಷ್ಠವಾದರೂ ಒಂದು ವೇಳಾಪಟ್ಟಿ ಸಿದ್ದ ಪಡಿಸಿಕೊಳ್ಳಬೇಕು. ಅದರಂತೆ ಓದಿದರೆ ಉತ್ತಮ ಫಲಿತಂಶ ಬರಲು ಸಾಧ್ಯ ಎಂದರು.
ಮಕ್ಕಳು ತಮ್ಮ ಸುತ್ತಲಿನ ಕಾನೂನಿನ ಜ್ಞಾನ ತಿಳಿದರೆ ಸಮುದಾಯ, ರಾಜ್ಯ, ದೇಶವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ಇಂತಹ ಆಶಯ ಅರ್ಥಪೂರ್ಣವಾಗಿ ಸಫಲವಾಗಲು ಇಂತಹ ಕಾರ್ಯಕ್ರಮಗಳು ಅಗತ್ಯ. 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಯಾವುದೇ ವಾಹನ ಚಲಾವಣೆ ಮಾಡಲು ನಿಷಿದ್ದ. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ತಮ್ಮ ಸುತ್ತಮುತ್ತ ನಡೆಯುವ ಬಾಲ್ಯ ವಿವಾಹ, ದೇವದಾಸಿ ಪದ್ದತಿಗೆ ಒಳಗಾಗುವ ಘಟನೆಗಳು ಕಂಡು ಬಂದರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ವಿದ್ಯಾರ್ಜನೆಯಲ್ಲಿ ಅಂಕ ಗಳಿಸುವುದೇ ಮುಖ್ಯ ಅಲ್ಲ. ಅದನ್ನು ಮೀರಿ ಜೀವನ ನಡೆಸಲು ಅನೇಕ ದಾರಿಗಳಿವೆ. ಆದರೆ ಮಕ್ಕಳು ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ ಕೂಡಲೇ ಆತ್ಮಹತ್ಯೆಗೆ ಮೊರೆ ಹೋಗುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಿ.ಆರ್.ಆರ್.ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಆರ್.ಶ್ರೀನಿವಾಸ ಮೂರ್ತಿ ವಹಿಸಿದ್ದರು. ಟ್ರಸ್ಟಿ ಆರ್.ಎಸ್.ಸ್ವಾತಿ, ಆಡಳಿತಾಧಿಕಾರಿ ಎಂ.ಬಸವರಾಜಪ್ಪ, ಮುಖ್ಯೋಪಾಧ್ಯಾಯರಾದ ಆರ್.ಬಿ.ಯಾದರ್, ಹೇಮಾ ಸಾವಳಗಿ, ಶಿಕ್ಷಕ ಹೆಚ್.ಎಸ್.ಹಾಲೇಶ್, ಕೆ.ಎಂ.ಶಿವಾನಂದಯ್ಯ ಉಪಸ್ಥಿತರಿದ್ದರು.







