ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತೊಮ್ಮೆ ಅವಕಾಶ : ಎಡಿಸಿ

ದಾವಣಗೆರೆ, ಜು.26: ದೃಢವಾದ ಹಾಗೂ ಜವಾಬ್ದಾರಿಯುವ ಸರ್ಕಾರವನ್ನು ಸ್ಥಾಪಿಸುವಲ್ಲಿ ಚುನಾವಣೆಗಳು ಭದ್ರ ಬುನಾದಿಯಾಗಿದ್ದು ಜುಲೈ 31 ರವರೆಗೆ 18 ರಿಂದ 21 ವರ್ಷದೊಳಗಿನ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರುನ್ನು ಸೇರ್ಪಡೆಗೊಳಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬುಧವಾರ ನಗರದ ಮಾಗನೂರು ಬಸಪ್ಪ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ಚುನಾವಣಾ ಶಾಖೆಯಿಂದ ವಿಶೇಷ ಆಂದೋಲನ-2017 ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕುರಿತು ವಿದ್ಯಾರ್ಥಿಗಳೊಂದಿಗಿನ ಸಂವಾದ (ಇಂಟೆರ್ಯಾಕ್ಟಿವ್ ಸ್ಕೂಲ್ ಎಂಗೇಜ್‌ಮೆಂಟ್) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
18 ವರ್ಷವಾದ ಕೂಡಲೇ ಭಾವಿ ಪ್ರಜೆಗಳಾದ ಯುವಜನತೆ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು ಹಾಗೂ ಚುನಾವಣೆ ಸಮಯದಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಜುಲೈ 31 ರವರೆಗೆ 18 ರಿಂದ 21 ವರ್ಷದೊಳಗಿನ ಯುವಜನತೆ ತಮ್ಮ ಸಮೀಪದ ಮತಗಟ್ಟೆಯಲ್ಲಿ ನೇಮಕಗೊಂಡಿರುವ ಬೂತ್ ಲೆವೆಲ್ ಆಫೀಸರ್‌ಗಳಿಗೆ ನಮೂನೆ 6 ರಲ್ಲಿ ಅರ್ಜಿಯೊಂದಿಗೆ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ವಯಸ್ಸಿನ ದಾಖಲೆ ಹಗೂ ವಾಸದ ದಾಖಲೆಯೊಂದಿಗೆ ಸಲ್ಲಿಸಬೇಕು. ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಲು ನಮೂನೆ-7 ಅರ್ಜಿಯನ್ನು ಸಲ್ಲಿಸಬೇಕೆಂದು ಮಾಹಿತಿ ನೀಡಿದರು. ಸೇರ್ಪಡೆ ಮಾಡುವ ಹಾಗೂ ಮತ ಚಲಾಯಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಕೂಲಂಕಷವಾಗಿ ತಿಳಿಸಿ, ಉತ್ತಮ ಸರ್ಕಾರಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿರುತ್ತದೆ ಎಂದು ಹೇಳಿದರು.







