ನಾಗರಪಂಚಮಿ ಹೆಸರಿನಲ್ಲಿ ಹಾಲು ವ್ಯಯ ಮಾಡಬೇಡಿ: ಮಲ್ಲಿಕಾರ್ಜುನ್ ಕಲಮರಹಳ್ಳಿ

ದಾವಣಗೆರೆ, ಜು.26: ನಾಗರಪಂಚಮಿ ಹೆಸರಿನಲ್ಲಿ ಹಾಲು ವ್ಯಯ ಮಾಡಬೇಡಿ ಎಂದು ಚಿಂತಕ ಮಲ್ಲಿಕಾರ್ಜುನ್ ಕಲಮರಹಳ್ಳಿ ಸಾರ್ವಜನಕರಲ್ಲಿ ಮನವಿ ಮಾಡಿದರು.
ನಗರದ ಜಯದೇವ ವೃತ್ತದಲ್ಲಿರುವ ಹನಗೋಡಿಮಠ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಏರ್ಪಡಿಸಿದ್ದ ನಾಗರಪಂಚಮಿ, ಸಂಪ್ರದಾಯ ಹಬ್ಬದ ಬದಲು ಬಸವ ಪಂಚಮಿ ವೈಚಾರಿಕ ಹಬ್ಬದ ಆಚರಣೆ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಾವಿಗೆ ಹಾಲು ಆಲರ್ಜಿ, ಇದನ್ನು ಜೀವಶಾಸ್ರ್ವೇ ಹೇಳುತ್ತದೆ. ಧಾರ್ಮಿಕತೆಯ ಸೋಗಿನಲ್ಲಿ ವೃಥಾ ಹಾವಿಗೆ ಹಿಂಸೆ ನೀಡುವ ಕೆಲಸವಾಗುತ್ತಿದೆ. ಹಾವು ಒಂದೇ ವೇಳೆ ಹಾಲು ಕುಡಿದರೆ, ಅಜೀರ್ಣತೆಯಿಂದ ಇಡೀ ದಿನ ಒದ್ದಾಡುತ್ತದೆ. ಅದ್ದರಿಂದ ನಾಗರಪಂಚಮಿ ಹೆಸರಿನಲ್ಲಿ ಹಾಲು ವ್ಯಯ ಮಾಡದೆ ಮಕ್ಕಳಿಗೆ ನೀಡಿ ಎಂದು ಹೇಳಿದರು.
ನಾಗರ ಬುಡಕಟ್ಟು ಸಮುದಾಯದ ದೇವರು. ಆ ಸಮುದಾಯದವರು ಹಾಲನ್ನು ವ್ಯಯ ಮಾಡದೇ ನೈವೇದ್ಯೆ ಮಾಡಿ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಹಬ್ಬವನ್ನು ಕೆಲ ವೈದಿಕ ಸಮುದಾಯದವರು ಸಂಪ್ರದಾಯಕ ಹಬ್ಬವಾಗಿ ಮಾಡುತ್ತಿದ್ದಾರೆ. ದಾವಣಗೆರೆ ನಗರದಲ್ಲಿ 3 ಲಕ್ಷ ಜನಸಂಖ್ಯೆ ಇದೆ. ಒಬ್ಬರು ಅರ್ಧ ಲೀಟರ್ ಬಳಸಿದರೆ 1.5 ಲಕ್ಷ ಲೀಟರ್ ಹಾಲು ವ್ಯಯವಾಗುತ್ತದೆ. ಇಂತಹ ಪೌಷ್ಟಿಕಯುಳ್ಳ ಆಹಾರವನ್ನು ಸದ್ಬಳಕೆ ಮಾಡಬೇಕು. ಈ ರೀತಿ ವ್ಯಯಮಾಡುವುದು ಸರಿಯಲ್ಲ ಎಂದರು.
ಹೆಚ್ .ಕೆ.ರಾಮಚಂದ್ರಪ್ಪ ಮಾತನಾಡಿ, ಸಮಾಜದಲ್ಲಿರುವ ಅನಿಷ್ಠ ಪದ್ದತಿ ಮತ್ತು ಮೌಢ್ಯಗಳನ್ನು ತೊಡೆದ ಹಾಕಿ ವೈಚಾರಿಕತೆಯನ್ನು ಬಿತ್ತಲು ಸತೀಶ್ ಜಾರಕಿಹೊಳೆಯವರು ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ನಮ್ಮೇಲ್ಲರ ಸಹಕಾರ ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾನವಬಂಧುತ್ವ ವೇದಿಕೆಯ ವಿಭಾಗೀಯ ಸಂಯೋಜಕ ರಾಘದೊಡ್ಮನಿ, ಸತೀಶ ಜಾರಕಿಹೊಳೆಯವರು ಮೌಢ್ಯ, ಕಂದಾಚಾರವನ್ನು ತೊಲಗಿಸಲು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ ಪ್ರತಿಭೆಗಳನ್ನು ಗುರುತಿಸುವ ಕೆಲಸವು ನಡೆಯತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರ ಬುಳ್ಳಸಾಗರದ ಸಿದ್ದರಾಮಪ್ಪ, ಉಪನ್ಯಾಸಕ ಭೀಮಣ್ಣ ಸುಣ್ಣಗಾರ್, ಡಿಎಸ್‌ಎಸ್ ಮುಖಂಡ ಮಲ್ಲೇಶ್‌ಪ್ಪ, ಮಂಜುನಾಥ ಕುಂದವಾಡ, ಶಾಲೆಯ ಮುಖ್ಯ ಶಿಕ್ಷಕ ಮುರುಗೇಶ್, ಶಿವಕುಮಾರ್ ಮಾಡಾಳ್, ಐರಣಿ ಚಂದ್ರು ಸೇರಿದಂತೆ ಇತರರು ಇದ್ದರು.







